ಹಾಸನ: ಜಿಲ್ಲೆಯ ಇಬ್ಬರು ಮಹಾನ್ ವ್ಯಕ್ತಿಗಳು ನಮ್ಮನ್ನು ಅಗಲಿರುವುದು ನೋವಿನ ಸಂಗತಿ. ಆದರೆ ಅವರ ಆದರ್ಶ ಮತ್ತು ಮಾರ್ಗದರ್ಶನ ಪ್ರತಿಯೊಬ್ಬರಿಗೂ ಕೂಡ ಪ್ರೇರಣೆಯಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಎಸ್.ಎಲ್. ಭೈರಪ್ಪ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಕೋಟ್ಯಂತರ ಜನ ಹುಟ್ಟುತ್ತಾರೆ, ಸಾಯುತ್ತಾರೆ. ಆದರೆ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿರುವವರು ಕೆಲವರು ಮಾತ್ರ. ಅಂಥವರ ಸಾಲಿನಲ್ಲಿ ಎಸ್.ಎಲ್. ಭೈರಪ್ಪ ಹಾಗೂ ಎಚ್.ಎಂ. ಶಿವಣ್ಣ ಅವರು ಎಂಬುದು ಹೆಮ್ಮೆಯ ವಿಚಾರ ಎಂದರು.
ಭೈರಪ್ಪನವರು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಆದರೆ ಅವರನ್ನು ನಾವು ಆ ರೀತಿ ಕಾಣುವ ಮೂಲಕ ಸಣ್ಣತನ ತೋರಿದ್ದೇವೆ. ಅಂತಹ ಮನಸ್ಥಿತಿಗಳು ನಮ್ಮಿಂದ ದೂರವಾಗಬೇಕು ಎಂದರು.
ವಿಶ್ವ ಒಕ್ಕಲಿಗ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, 'ಎಚ್.ಎಂ. ಶಿವಣ್ಣ ನನಗೆ ಚಿರಪರಿಚಿತರು. ನಾನು ಇಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಾಂಧಿ ಭವನ ನಿರ್ಮಾಣ ಆಗಬೇಕಾದರೆ ಅವರ ಪಾತ್ರ ಅತ್ಯಂತ ಪ್ರಮುಖವಾದುದು. ಸರ್ಕಾರ ಮಾಡದೇ ಇದ್ದದ್ದನ್ನು ಒಬ್ಬ ವ್ಯಕ್ತಿ, ಸರ್ಕಾರ ಮತ್ತು ಅಧಿಕಾರಿಗಳನ್ನು ಹಿಡಿದು ಕೆಲಸ ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಭೈರಪ್ಪ ಅವರು ಕನ್ನಡ ಸಾಹಿತ್ಯ ಲೋಕಕ್ಕಷ್ಟೇ ಅಲ್ಲದೆ ಇಡೀ ಭಾರತದ ಸಾಹಿತ್ಯ ಲೋಕಕ್ಕೆ ಹಲವಾರು ಕೃತಿ ಮತ್ತು ಕಾದಂಬರಿ ನೀಡುವ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ. ಸಾಕಷ್ಟು ಪರ ವಿರೋಧಗಳ ನಡುವೆಯೂ ನೇರ ನಿಷ್ಠುರವಾದಿಯಾಗಿ ತಮ್ಮ ಬರವಣಿಗೆಗಳ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಭೈರಪ್ಪ, ನಮ್ಮ ಹಾಸನ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಚಾರ ಎಂದರು.
ಸಂಸದ ಶ್ರೇಯಸ್ ಪಟೇಲ್ ಅವರು ಮಾತನಾಡಿ, ‘ಎರಡು ದಿನಗಳಿಂದ ಜಿಲ್ಲೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಜಿಲ್ಲೆಯ ಇಬ್ಬರು ಮಹಾನ್ ವ್ಯಕ್ತಿಗಳಾದ ಎಸ್.ಎಲ್. ಭೈರಪ್ಪ ಮತ್ತು ಎಚ್.ಎಂ. ಶಿವಣ್ಣ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ’ ಎಂದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ‘ಶಿವಣ್ಣ ಗಾಂಧಿ ಭವನ ನಿರ್ಮಾಣದ ಪ್ರಮುಖ ರೂವಾರಿಗಳು. ಅದೇ ರೀತಿ ಭೈರಪ್ಪನವರು ತಮ್ಮ ಬರಹದ ಮೂಲಕವೇ ಎಲ್ಲರ ಮನಸ್ಸು ಗೆದ್ದಿರುವ ಸಾಹಿತಿ. ಅವರನ್ನು ಸ್ಮರಿಸುವ ಕೆಲಸ ಶ್ಲಾಘನೀಯ’ ಎಂದು ಹೇಳಿದರು.
ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಗಿರೀಶ್ ಚನ್ನವೀರಪ್ಪ, ಚಿಂತಕ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿದರು. ಸಂಗಮೇಶ್ವರ ಸ್ವಾಮೀಜಿ, ಸಾಹಿತಿ ಬಾನು ಮುಷ್ತಾಕ್, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್ ಗುರುದೇವ್, ಮಾಜಿ ಶಾಸಕ ಬಿ.ವಿ. ಕರೀಗೌಡ, ಜಾನಪದ ತಜ್ಞ ಹಂಪನಳ್ಳಿ ತಿಮ್ಮೇಗೌಡ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜೇಗೌಡ, ಉಪಮೇಯರ್ ಹೇಮಲತಾ ಕಮಲ್‍ಕುಮಾರ್. ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ವೀರಶೈವ ಸಮಾಜದ ಮುಖಂಡ ಐಸಾಮಿಗೌಡ, ವಾರ್ತಾಧಿಕಾರಿ ಮೀನಾಕ್ಷಮ್ಮ, ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಎಚ್.ಪಿ. ಮೋಹನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ವೈದ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.