ADVERTISEMENT

ಬೆಂಗಳೂರಿನ ಯುನೈಟೆಡ್ ತಂಡಕ್ಕೆ ಟ್ರೋಫಿ

ಅರಸೀಕೆರೆಯಲ್ಲಿ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 3:24 IST
Last Updated 23 ಡಿಸೆಂಬರ್ 2025, 3:24 IST
ಅರಸೀಕೆರೆಯಲ್ಲಿ ನಡೆದ ದಿವಂಗತ ಎಚ್.ಟಿ.ಮಾದೇವ್ ಅವರ ಸ್ಮರಣಾರ್ಥ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಪ್ರತಿಷ್ಠಿತ ಲೆಜೆಂಡ್ ಟ್ರೋಫಿಯನ್ನ ತನ್ನದಾಗಿಸಿಕೊಂಡ ಬೆಂಗಳೂರಿನ ಯುನೈಟೆಡ್ ತಂಡ
ಅರಸೀಕೆರೆಯಲ್ಲಿ ನಡೆದ ದಿವಂಗತ ಎಚ್.ಟಿ.ಮಾದೇವ್ ಅವರ ಸ್ಮರಣಾರ್ಥ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಪ್ರತಿಷ್ಠಿತ ಲೆಜೆಂಡ್ ಟ್ರೋಫಿಯನ್ನ ತನ್ನದಾಗಿಸಿಕೊಂಡ ಬೆಂಗಳೂರಿನ ಯುನೈಟೆಡ್ ತಂಡ   

ಅರಸೀಕೆರೆ: ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಹಿರಿಯ ರಾಷ್ಟ್ರೀಯ ಕ್ರೀಡಾಪಟು ದಿವಂಗತ ಎಚ್.ಟಿ.ಮಾದೇವ್ ಅವರ ಸ್ಮರಣಾರ್ಥ ಕಳೆದ ಮೂರು ದಿನಗಳಿಂದ ನಡೆದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಪ್ರತಿಷ್ಠಿತ ಲೆಜೆಂಡ್ ಟ್ರೋಫಿಯನ್ನ ಬೆಂಗಳೂರಿನ ಯುನೈಟೆಡ್ ತಂಡ ತನ್ನದಾಗಿಸಿಕೊಂಡಿತು.

ಫ್ರೆಂಡ್ಸ್ ಅರಸೀಕೆರೆ ತಂಡ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೂರು ದಿನಗಳ ಕ್ರಿಕೆಟ್ ಜಾತ್ರೆ ಮುಕ್ತಾಯಗೊಂಡಿತು.

ಇದೇ ಮೊದಲ ಬಾರಿಗೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ 40 ವರ್ಷ ಮೇಲ್ಪಟ್ಟ ಕ್ರಿಕೆಟ್ ಆಟಗಾರರಿಗೆ ರಾಜ್ಯಮಟ್ಟದ ಟೂರ್ನಮೆಂಟ್ ಆಯೋಜಿಸುವ ಮೂಲಕ ವೇದಿಕೆ ಕಲ್ಪಿಸಿತು. ತಾಲ್ಲೂಕಿನ 8 ತಂಡಗಳು ಒಳಗೊಂಡಂತೆ ರಾಜ್ಯದ ಪ್ರತಿಷ್ಠಿತ ಎಂಟು ತಂಡಗಳು ಪಾಲ್ಗೊಳ್ಳುವ ಅವಕಾಶವಿದ್ದ ಕಾರಣ ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಂಗಳೂರು ಜಿಲ್ಲೆಗಳ ತಂಡಗಳು ಸೇರಿದಂತೆ ಪ್ರತಿಷ್ಠಿತ 16 ತಂಡಗಳು ಲೆಜೆಂಡ್ ಟ್ರೋಫಿಗಾಗಿ ಹಣಾಹಣಿ ನಡೆಸಿದವು.

ADVERTISEMENT

ಅಂತಿಮವಾಗಿ ಬೌಲಿಂಗ್ ಬ್ಯಾಟಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಗಮನಹರ ಪ್ರದರ್ಶನ ನೀಡಿದ ಬೆಂಗಳೂರು ಯುನೈಟೆಡ್ ತಂಡಕ್ಕೆ ವಿಜಯಲಕ್ಷ್ಮಿ ಒಲಿಯಿತು. ಆಕರ್ಷಕ ಟ್ರೋಫಿಯೊಂದಿಗೆ ಒಂದು ಲಕ್ಷ ನಗದು ಬಹುಮಾನ, ಎರಡನೇ ಸ್ಥಾನ ಪಡೆದ ತಂಡಕ್ಕೆ ₹ 50 ಸಾವಿರ ನಗದು ಬಹುಮಾನ ಜೊತೆಗೆ ಟ್ರೋಫಿ ದೊರೆಯಿತು.

ಇನ್ನು ಮೂರನೇ ಸ್ಥಾನಕ್ಕೆ ಮಲ್ಪೆ ಫಿಶ್ ಮ್ಯಾನ್ ತಂಡ ಭಾಜನವಾದರೆ, ನಾಲ್ಕನೇ ಸ್ಥಾನಕ್ಕೆ ಅಟ್ಯಾಕರ್ಸ್ ಅರಸೀಕೆರೆ ತಂಡ ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಸರಣಿ ಉದ್ದಕ್ಕೂ ಉತ್ತಮ ಬೌಲಿಂಗ್‌, ಸ್ಪೋಟಕ ಬ್ಯಾಟಿಂಗ್ ನಡೆಸಿದ ಇಮ್ರಾನ್ ಸರಣಿ ಶ್ರೇಷ್ಠ ಆಟಗಾರರಾಗಿ ಹೊರ ಹೊಮ್ಮುವ ಮೂಲಕ ಗಮನ ಸೆಳೆದರು.

ಟ್ರೋಫಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡ ರಾಜ್ಯ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜಿಸಿದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ವಾಲಿಬಾಲ್ ಹಾಗೂ ಕಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಿದರೆ ಬೆಂಬಲ ನೀಡುವುದಾಗಿ ಘೋಷಿಸಿದರು.

ವಕೀಲ ಹಾಗೂ ಜೆಡಿಎಸ್ ಮುಖಂಡ ವಿವೇಕ್ ಮಾತನಾಡಿ, ಐಪಿಎಲ್ ಮಾದರಿಯಲ್ಲಿ ನಡೆದ ಈ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯ ಪ್ರತಿಯೊಂದು ಪಂದ್ಯವು ರೋಚಕತೆಯಿಂದ ಕೂಡಿತ್ತು. ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಹಿರಿಯ ಆಟಗಾರರು ಯುವ ಕ್ರಿಕೆಟರ್ಸ್ ನಾಚುವಂತೆ ಬ್ಯಾಟಿಂಗ್ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ತೋರಿದ ಕೈಚಳಕ ತೋರಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಆರ್. ಅನಂತಕುಮಾರ್ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಫೋನ್‌ ಎಂಬ ಮಾಯಾ ಲೋಕದಲ್ಲಿ ಮುಳುಗಿ ಹೋಗುತ್ತಿದ್ದು ಇದರಿಂದ ವ್ಯತಿರಿಕ್ತ ಪರಿಣಾಮ ಸಮಾಜದ ಮೇಲೆ ಬೀರಲು ಆರಂಭಿಸಿದೆ. ಇದು ಕಳವಳದ ಸಂಗತಿಯಾಗಿದ್ದು ಈ ರೀತಿಯ ಕ್ರೀಡಾಕೂಟಗಳು ಮಕ್ಕಳ ಮನಸು ಸೆಳೆಯುವಂತಾಗಬೇಕಿದೆ ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್ ಬೀಸುವ ಮೂಲಕ ನಗರಸಭೆಯ ಮಾಜಿ ಅಧ್ಯಕ್ಷ ಎಂ,ಸಮಿವುಲ್ಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದ್ದರು. ಸಮಾರಂಭದಲ್ಲಿ ಕ್ರೀಡಾಕೂಟದ ಪ್ರೋತ್ಸಾಹಕರಾದ ವೈದ್ಯ ಶಿವಕುಮಾರ್, ಕೆ.ವಿ.ಎನ್ ಶಿವು, ರಮೇಶ್ ನಾಯ್ಡು, ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸಂದೀಪ್ ಮಂಡೇಲಾ, ಕಾರ್ಯದರ್ಶಿ ವಿಜಯಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.