ಬೇಲೂರು (ಹಾಸನ ಜಿಲ್ಲೆ): ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಹಳೆಯ ಕಟ್ಟಡದ ಸಜ್ಜಾ ಕುಸಿದು ನಜೀರ್ (38) ಹಾಗೂ ಅಮರನಾಥ್ (42) ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಭಾನುವಾರ ಮಧ್ಯಾಹ್ನ 1.15ರ ಸುಮಾರಿಗೆ ಕಟ್ಟಡದ ಬಳಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಜ್ಯೋತಿ, ಹೂವಿನ ವ್ಯಾಪಾರ ಮಾಡುತ್ತಿದ್ದ ನೀಲಮ್ಮ, ಚಿಲ್ಲರೆ ಅಂಗಡಿಯ ದೀಪಾ ಹಾಗೂ ಗ್ರಾಹಕರಾದ ಶಿಲ್ಪಾ, ನಜೀರ್ ಮತ್ತು ಅಮರನಾಥ್ (42) ಎಂಬುವವರ ಮೇಲೆ ಕಾಂಕ್ರೀಟ್ ಸಜ್ಜಾ ಬಿದ್ದಿದೆ.
ಅಮರನಾಥ್ ಅವರ ಎದೆಯ ಭಾಗಕ್ಕೆ ಸಜ್ಜಾ ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟರು. ತೀವ್ರ ಗಾಯಗೊಂಡಿದ್ದ ನಜೀರ್ ಹಾಸನದ ಆಸ್ಪತ್ರೆಯಲ್ಲಿ ಮೃತಪಟ್ಟರು. ಗಾಯಗೊಂಡಿರುವ ಜ್ಯೋತಿ ಹಾಗೂ ಶಿಲ್ಪಾ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೀಪಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
‘ಮಳಿಗೆಗಳು ದುಸ್ಥಿತಿಯಲ್ಲಿವೆ ಎಂದು ಕಟ್ಟಡ ಕೆಡವಲು ಮಾಲೀಕ ದಿವಂಗತ ಸತ್ಯನಾರಾಯಣಗೌಡರ ಸಂಬಂಧಿಕರು ಮುಂದಾಗಿದ್ದರು. ಆದರೆ, ಕೆಲ ಬಾಡಿಗೆದಾರರು ನ್ಯಾಯಾಲಯದ ಮೆಟ್ಟಿಲೇರಿ, ತೆರವು ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ. ದಾವೆ ಹೂಡಿರುವ ಬಾಡಿಗೆದಾರರೇ ಘಟನೆಗೆ ನೇರ ಹೊಣೆಯಾಗಿದ್ದು, ಅವರೇ ಇದಕ್ಕೆ ಪರಿಹಾರ ನೀಡಬೇಕು’ ಎಂದು ಸತ್ಯನಾರಾಯಣಗೌಡರ ಸಂಬಂಧಿ ರತ್ನಾಕರ್ ಹಾಗೂ ಚಿದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.