ADVERTISEMENT

ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವುದು ಮುಖ್ಯ: ಜಿಲ್ಲಾಧಿಕಾರಿ ಲತಾಕುಮಾರಿ

ಸರ್ಕಾರ–ಜನರ ನಡುವಿನ ಸೇತುವೆಯಾಗಿ ಕೆಲಸ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:20 IST
Last Updated 25 ಜೂನ್ 2025, 16:20 IST
ಕೆ.ಎಸ್‌. ಲತಾಕುಮಾರಿ
ಕೆ.ಎಸ್‌. ಲತಾಕುಮಾರಿ   

ಹಾಸನ: ‘ಈ ಹಿಂದೆ ಯಥಾ ರಾಜ, ತಥಾ ಪ್ರಜಾ ಎಂಬ ಮಾತಿತ್ತು. ಆದರೆ ಇಂದು ಯಥಾ ಪ್ರಜಾ, ತಥಾ ರಾಜ ಎಂಬಂತಾಗಿದೆ. ನಾವು ಪ್ರಜೆಗಳೊಂದಿಗೆ ಬೆರೆತು ಸಮಸ್ಯೆ ಅರಿತು ಕೆಲಸ ಮಾಡಬೇಕು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡರೆ, ಸರ್ಕಾರ ಹಾಗೂ ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬಹುದು ಎಂದು ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಹೇಳಿದರು. ‌

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರಿಗೆ ಅಗತ್ಯವಾಗಿರುವ ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳನ್ನು ತಲುಪಿಸುವುದೇ ನಮ್ಮ ಕರ್ತವ್ಯ. ಮಹಿಳೆಯರಿಗೆ ಅವಕಾಶ ಕೊಟ್ಟರೆ ಬದಲಾವಣೆ ಮಾಡಲು ಸಾಧ್ಯ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಪ್ರಾತಿನಿಧ್ಯ ಇರಬೇಕು ಎಂಬ ಅಭಿಪ್ರಾಯಪಟ್ಟರು.

ADVERTISEMENT

ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದಾಗ ಮಾತ್ರ ತಪ್ಪು ತಿದ್ದಿಕೊಳ್ಳಲು ಅವಕಾಶ ಸಿಗುತ್ತದೆ. ನಾವು ಮಾಡಿದ್ದು ತಪ್ಪಿದ್ದರೆ ತಿಳಿಸಿ. ತಿದ್ದುಕೊಂಡು ಕೆಲಸ ಮಾಡುತ್ತೇವೆ. ಮಾಧ್ಯಮ ಸಹ ಜಿಲ್ಲಾಡಳಿತದೊಂದಿಗೆ ಸಹಕರಿಸಿದರೆ ಉತ್ತಮ ಆಡಳಿತ ನೀಡಬಹುದಾಗಿದೆ ಎಂದರು.

ನಗರದಲ್ಲಿ ಸಂಚಾರ ದಟ್ಟಣೆ ಸೇರಿದಂತೆ ನಾನಾ ಸಮಸ್ಯೆಗಳಿವೆ. ಪಾದಚಾರಿ ಮಾರ್ಗಗಳು ವಿಶಾಲವಾಗಿ ಇರಬೇಕು. ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಇರಬಾರದು. ಪಾದಚಾರಿ ಆಂದೋಲನ ಅಗತ್ಯವಿದೆ. ಇದಕ್ಕೆ ಉತ್ತಮ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.

ಇತ್ತೀಚಿನ ಪರಿಶೀಲನೆಯಂತೆ ಬಹುತೇಕ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಹಾಗೂ ಇತರೆ ದೊಡ್ಡ ವಾಣಿಜ್ಯ ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್‌ಗೆ ಜಾಗವಿದ್ದರೂ, ಅದನ್ನು ಸ್ಕ್ಯಾನಿಂಗ್ ಸೆಂಟರ್ ಸೇರಿದಂತೆ ಇತರ ವಿಭಾಗಗಳನ್ನಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಸಂಚಾರ ಸಮಸ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹಾಸನಾಂಬ ಜಾತ್ರಾ ಮಹೋತ್ಸವ ದಶಕಗಳ ಹಿಂದೆ ಕೇವಲ ಜಿಲ್ಲೆಯ ಹಬ್ಬವಾಗಿ ಆಚರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ, ನೆರೆ ರಾಜ್ಯ ಸೇರಿದಂತೆ ದೇಶ– ವಿದೇಶಗಳಿಂದಲೂ ಹೆಚ್ಚಿನ ಭಕ್ತರು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ತೊಂದರೆ ಆಗದಂತೆ ಶೀಘ್ರ ದರ್ಶನಕ್ಕೆ ಹಾಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ಕಲೆ, ಸಂಸ್ಕೃತಿ ಬಿಂಬಿಸುವ ಹೊಯ್ಸಳೋತ್ಸವ ನನೆಗುದಿಗೆ ಬಿದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವರ್ಷದಲ್ಲೇ ಹೊಯ್ಸಳೋತ್ಸವ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಈಗ ಹಾಸನ ಜಿಲ್ಲಾಧಿಕಾರಿಯಾಗಿ ಬಂದಿರುವುದು ಅದೃಷ್ಟವೇ ಸರಿ. ಒಂದೇ ದಿನದಲ್ಲಿ ಎಲ್ಲವನ್ನೂ ಬಗೆಹರಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಜಿಲ್ಲೆಯ ಸಮಸ್ಯೆಯನ್ನು ಅವಲೋಕಿಸಿ, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನ ಅಧಿಕಾರದ ಕಾರ್ಯ ವ್ಯಾಪ್ತಿ ಯಲ್ಲಿ ಕೆಲಸ ಮಾಡುವುದಾಗಿ ಲತಾಕುಮಾರಿ ತಿಳಿಸಿದರು.

ಪ್ರಮುಖವಾಗಿ ನೀರಾವರಿ ಯೋಜನೆಯಡಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸುವುದು, ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳಿಗೆ ಮೂಲಸೌಕರ್ಯ, ಉತ್ತಮ ಶಿಕ್ಷಣ ವ್ಯವಸ್ಥೆ, ಇ-ಖಾತೆ, ದರ್ಖಾಸ್ತು, ಪೋಡಿ, ಬಾಲ್ಯ ವಿವಾಹ ತಡೆ, ಬಾಲ ಗರ್ಭಿಣಿ, ಪೋಕ್ಸೊ ಪ್ರಕರಣ ತಹಬದಿಗೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಅವಲೋಕಿಸಿದ್ದು, ಇವುಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಮಾಜಿ ಅಧ್ಯಕ್ಷ ರವಿ ನಾಕಲಗೂಡು ಮಾತನಾಡಿದರು.

ನಾವೆಲ್ಲ ಸರ್ಕಾರದ ಸೇವಕರು. ಅಂದರೆ ಜನರ ಸೇವಕರಂತೆ ಕಾರ್ಯ ನಿರ್ವಹಿಸುತ್ತೇವೆ. ಜನರನ್ನು ದೂರ ಇಟ್ಟರೆ ಅವರ ಸಮಸ್ಯೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಜನರೊಂದಿಗೆ ಇದ್ದು ಉತ್ತಮ ಆಡಳಿತ ನೀಡಬೇಕು.
– ಕೆ.ಎಸ್‌. ಲತಾಕುಮಾರಿ, ಜಿಲ್ಲಾಧಿಕಾರಿ

‘ಓದಿನ ಗೀಳಿನಿಂದ ಐಎಎಸ್‌ ಅಧಿಕಾರಿಯಾದೆ’

ರೈತ ಕುಟುಂಬದಿಂದ ಬಂದ ನನಗಿದ್ದ ಓದಿನ ಗೀಳು ಇಂದು ನನ್ನನ್ನು ಜಿಲ್ಲಾಧಿಕಾರಿ ಹುದ್ದೆಯನ್ನು ಅಲಂಕರಿಸುವ ಹಂತಕ್ಕೆ ತಲುಪಿಸಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು. ನಾನು ಎಸ್‌ಎಸ್‌ಎಲ್‌ಸಿ ನಂತರ ವಿಜ್ಞಾನ ಆಯ್ದುಕೊಂಡೆ. ಪದವಿ ಮುಗಿಯುತ್ತಿದ್ದಂತೆಯೇ ಮನೆಯಲ್ಲಿ ಮದುವೆ ಮಾಡಿದರು. ಮದುವೆಯ ನಂತರ ಬ್ಯಾಂಕ್ ಉದ್ಯೋಗಿಯಾಗಿರುವ ಪತಿ ಪ್ರೋತ್ಸಾಹ ನೀಡಿದರು ಎಂದು ತಿಳಿಸಿದರು. ನೀನು ಕೆಲಸ ಮಾಡಬೇಕೆಂದಿದ್ದರೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೋ ಎಂದು ಹೇಳಿದ್ದರು. 7 ತಿಂಗಳು ಮನೆಯಲ್ಲಿಯೇ ಕುಳಿತು ಯಾವುದೇ ತರಬೇತಿ ಪಡೆಯದೇ ಯುಪಿಎಸ್‌ಸಿ ಪ್ರಿಲಿಮ್ಸ್ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣಳಾದೆ. ಇದನ್ನು ಮನಗಂಡ ಪತಿ ಮತ್ತಷ್ಟು ಪ್ರೋತ್ಸಾಹ ನೀಡಿದರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.