ADVERTISEMENT

ಹಳೇಬೀಡಿಗೆ ಯುನೆಸ್ಕೊ ತಂಡ ಇಂದು

ಸೊರಗಿದ ಉದ್ಯಾನಕ್ಕೆ ಜೀವಕಳೆ: ಸ್ವಚ್ಛಗೊಂಡ ವಿಗ್ರಹಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 5:27 IST
Last Updated 9 ಆಗಸ್ಟ್ 2024, 5:27 IST
ಯುನೆಸ್ಕೋ ತಂಡ ಬರುತ್ತಿರುವುದರಿಂದ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಉದ್ಯಾನದಲ್ಲಿ ಬೇಲಿಗಳನ್ನು ಸ್ವಚ್ಛ ಮಾಡಲಾಯಿತು.
ಯುನೆಸ್ಕೋ ತಂಡ ಬರುತ್ತಿರುವುದರಿಂದ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಉದ್ಯಾನದಲ್ಲಿ ಬೇಲಿಗಳನ್ನು ಸ್ವಚ್ಛ ಮಾಡಲಾಯಿತು.   

ಹಳೇಬೀಡು: ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಯುನೆಸ್ಕೊ ತಂಡ ದೇವಾಲಯಕ್ಕೆ ಬರಲಿದ್ದು, ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ನಿರ್ವಹಣೆ ಇಲ್ಲದೆ 4 ತಿಂಗಳಿಂದ ಸೊರಗಿದ್ದ ದೇವಾಲಯದ ಉದ್ಯಾನಕ್ಕೆ ಕಾಯಕಲ್ಪ ದೊರಕಿದೆ. ಸಿಬ್ಬಂದಿ ಕೊರತೆ ಜೊತೆಗೆ ದಿನಗೂಲಿ ಕಾರ್ಮಿಕರ ನವೀಕರಣ ಕಾರ್ಯ ಸ್ಥಗಿತಗೊಂಡಿದ್ದರಿಂದ ಉದ್ಯಾನ ಅಧೋಗತಿಗೆ ತಲುಪಿತ್ತು. ಉದ್ಯಾನದ ಹುಲ್ಲು ಹಾಸು ಎತ್ತರವಾಗಿ ಬೆಳೆದು ನಿಂತಿದ್ದರಿಂದ ಹಾವು, ಕ್ರಿಮಿಕೀಟಗಳು ಸೇರಿಕೊಳ್ಳುವ ಸ್ಥಿತಿಗೆ ತಲುಪಿತ್ತು. ಪ್ರವಾಸಿಗರು ಉದ್ಯಾನದಲ್ಲಿ ಕುಳಿತು ಕಾಲ ಕಳೆಯುವುದಕ್ಕೆ ಅವಕಾಶ ಇಲ್ಲದಂತಾಗಿತ್ತು. ಉದ್ಯಾನದ ದುಸ್ಥಿತಿ ಯನ್ನು ನೋಡಿದ ಪ್ರವಾಸಿಗರು ಅಸಹ್ಯ ಪಡುತ್ತಿದ್ದರು. ಯುನೆಸ್ಕೊ ತಂಡ ಬರುತ್ತಿರುವುದರಿಂದ ಉದ್ಯಾನಕ್ಕೆ ಈಗ ಜೀವಕಳೆ ಬಂದಂತಾಗಿದೆ.

ದೇವಾಲಯದ ವಿಗ್ರಹಗಳ ಮೇಲೆ ದೂಳಿನ ಸಣ್ಣ ಕಣವೂ ಇಲ್ಲದಂತೆ ಸ್ವಚ್ಛ ಮಾಡಲಾಗಿದೆ. ಮ್ಯೂಸಿಯಂನಲ್ಲಿಯೂ ಸ್ವಚ್ಛತೆ ಕೆಲಸ ಭರದಿಂದ ಸಾಗಿದೆ. ಶೌಚಾಲಯದಲ್ಲಿ ನೀರು ಪೂರೈಕೆ ಸಮರ್ಪಕಗೊಳಿಸಲಾಗಿದೆ. ದುರ್ವಾಸನೆ ಹರಡದಂತೆ ಕ್ರಮ ಕೈಗೊಂಡಿದ್ದಾರೆ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಡುವ ಸ್ಥಳ ಮಾತ್ರವಲ್ಲದೇ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸ್ವಚ್ಛತೆ ಕೆಲಸ ಭರದಿಂದ ಸಾಗಿದೆ.

ADVERTISEMENT

ವಾಹನ ಪಾರ್ಕಿಂಗ್ ಸ್ಥಳ, ದೇವಾಲಯದ ಕಾಂಪೌಂಡ್ ಪಕ್ಕದ ಚರಂಡಿ ಹಾಗೂ ರಸ್ತೆ ಬದಿಯಲ್ಲಿ ಸ್ವಚ್ಛತೆ ಕೆಲಸ ನಡೆಯಿತು. ಪಾರ್ಕಿಂಗ್ ಗುತ್ತಿಗೆದಾರರು ಹಾಗೂ ಸಿಬ್ಬಂದಿ ಸ್ವಚ್ಛತೆಯ ಕೆಲಸಕ್ಕೆ ಕೈ ಜೋಡಿಸಿದ್ದರು. ಹೊಯ್ಸಳೇಶ್ವರ ದೇವಾಲಯದ ಹಳೆಯ ಪ್ರವೇಶ ದ್ವಾರದ ‌ಸುತ್ತ ಅಸಹ್ಯವಾಗಿ ಕಾಣುತ್ತಿದ್ದ ಫ್ಲೆಕ್ಸ್ ಅವಶೇಷಗಳನ್ನು ತೆರವು ಮಾಡಲಾಯಿತು.

‘ಶೌಚಾಲಯ ಸೌಲಭ್ಯ ಹೆಚ್ಚಿಸುವುದರೊಂದಿಗೆ, ಪ್ರವಾಸಿಗರು ಸುರಕ್ಷಿತವಾಗಿ ತಮ್ಮ ಲಗೇಜ್‌ ಇಡುವಂತಹ ಕ್ಲಾಕ್ ರೂಂ, ದೂರದಿಂದ ಬರುವ ಪ್ರವಾಸಿಗರ ವಿಶ್ರಾಂತಿ ಪಡೆಯಲು ಅನುಕೂಲ ಆಗುವ ಕೆಫೆಟೇರಿಯಾ ನಿರ್ಮಾಣ ಆಗಬೇಕಾಗಿದೆ’ ಎಂದು ಪ್ರವಾಸೋದ್ಯಮ ಆಸಕ್ತ ಎಚ್.ವಿ. ಶಿವಕುಮಾರ್ ತಿಳಿಸಿದರು.

ಹಳೇಬೀಡಿನ ಉದ್ಯಾನದಲ್ಲಿ ಬೆಳೆದು ನಿಂತಿದ್ದ ಹುಲ್ಲು ಮೈದಾನ ಸ್ವಚ್ಛ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.