ADVERTISEMENT

ಕೇಂದ್ರ ಬಜೆಟ್‌: ರಾಜ್ಯಕ್ಕೆ ಕೊಡುಗೆ ಶೂನ್ಯ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 6:10 IST
Last Updated 4 ಫೆಬ್ರುವರಿ 2021, 6:10 IST
ಎಚ್‌.ಪಿ. ಸ್ವರೂಪ್‌
ಎಚ್‌.ಪಿ. ಸ್ವರೂಪ್‌   

ಹಾಸನ: ‘ಸಂಸದ ಪ್ರಜ್ವಲ್ ರೇವಣ್ಣ ಕೇಂದ್ರ ಬಜೆಟ್‍ನಲ್ಲಿ ಜಿಲ್ಲೆಗೆ ಯಾವುದಾದರೂ ವಿಶೇಷ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿರುವ ಶಾಸಕ ಪ್ರೀತಂ ಜೆ. ಗೌಡ, ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿಸಲಿ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಪ್ರಶ್ನಿಸಿದರು.

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಎಚ್.ಡಿ. ರೇವಣ್ಣ ಮಂಜೂರು ಮಾಡಿಸಿಕೊಂಡು ಬಂದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತಾ ಕಾಲ ಕಳೆಯುತ್ತಿರುವ ಶಾಸಕರು, ಸಂಸದರ ಬಗ್ಗೆ ಮಾತನಾಡುವುದು ಅಗತ್ಯವಿಲ್ಲ. ಕೇಂದ್ರ ಸರ್ಕಾರ ಹಾಸನ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಕಡೆಗಣಿಸಿದೆ. 25 ಬಿಜೆಪಿ ಸಂಸದರ ಕ್ಷೇತ್ರಗಳಿಗೆ ಯಾವ ಯೋಜನೆ ದೊರೆತಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ವಿಶೇಷ ಯೋಜನೆ ಘೋಷಿಸಬೇಕೆಂದರೆ ರಾಜ್ಯದಿಂದ ಪ್ರಸ್ತಾವ ಸಲ್ಲಿಕೆಯಾಗಿರಬೇಕು ಎಂಬ ಸಾಮಾನ್ಯ ಪರಿಕಲ್ಪನೆ ಶಾಸಕರಿಗೆ ಇಲ್ಲ. ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ ಅವರ ಹಾಜರಾತಿ ಕಡಿಮೆಯಿದೆ ಎಂದು ಸುಳ್ಳು ಹೇಳುವ ಬದಲು, ಸೂಕ್ತ ದಾಖಲಾತಿಗಳಿದ್ದರೆ ಬಹಿರಂಗಪಡಿಸಲಿ’ ಎಂದರು.

ADVERTISEMENT

‘ಹಂದಿನಕೆರೆಯಿಂದ ಸತ್ಯಮಂಗಲ ಕೆರೆಗೆ ನೀರು ಹರಿಸುವ ಯೋಜನೆ ತಮ್ಮ ಸಾಧನೆ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಅದಕ್ಕೆ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಕ್ರಿಯಾ ಯೋಜನೆ ರೂಪಿಸಿದ್ದರು. ನಗರದಲ್ಲಿ ನಡೆಯುತ್ತಿರುವ ಅಮೃತ್‍ಯೋಜನೆ ಕೆಲಸ ಎಲ್ಲಿಗೆ ತಲುಪಿದೆ ಎಂಬುದರ ಕುರಿತು ಯಾರಿಗೂ ಮಾಹಿತಿ ಇಲ್ಲ. ಅ ಬಗ್ಗೆ ಸಭೆಗಳನ್ನು ಕರೆದಿಲ್ಲ. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ₹ 144 ಕೋಟಿಅನುದಾನವನ್ನೇ 6 ಕೆರೆ 9 ಉದ್ಯಾನ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿದೆ’ ಎಂದು ಆರೋಪಿಸಿದರು.

ಅಧಿಕಾರಿಗಳಿಂದ ಹಣ ವಸೂಲಿ ಮಾಡುವುದೇ ಶಾಸಕರ ನಿತ್ಯ ಕಾಯಕವಾಗಿದೆ ಎಂದು ಆರೋಪಿಸಿದರು.

ನಗರಸಭೆ ಸದಸ್ಯ ಪ್ರಶಾಂತ್, ಮಾಜಿ ಸದಸ್ಯರಾದ ಮಹೇಶ್, ಇರ್ಷಾದ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.