ADVERTISEMENT

ಕರಾವಳಿಯಲ್ಲಿ ಸಾಮರಸ್ಯ ಕಾಪಾಡಲು ಒತ್ತಾಯ

ಸೌಹಾರ್ದ ಕರ್ನಾಟಕ, ದಲಿತ ಜನಪರ ಸಂಘಟನೆ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 13:44 IST
Last Updated 2 ಜುಲೈ 2025, 13:44 IST
ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಹಾಸನದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು
ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಹಾಸನದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು   

ಹಾಸನ: ರಾಜ್ಯದ ಕರಾವಳಿಯಲ್ಲಿ ಹೆಚ್ಚುತ್ತಿರುವ ಕೋಮುಗಲಭೆ, ಹಿಂಸಾಚಾರ, ದ್ವೇಷ ಹರಡುವ ದುಷ್ಟ ಶಕ್ತಿಗಳಿಗೆ ಕಡಿವಾಣ ಹಾಕಿ, ಶಾಂತಿ, ಸಾಮರಸ್ಯ ಕಾಪಾಡುವಂತೆ ಸೌಹಾರ್ದ ಕರ್ನಾಟಕ, ದಲಿತ ಜನಪರ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ದ್ವೇಷದ ಕೊಲೆಗಳು ಮತ್ತೊಮ್ಮೆ ಭುಗಿಲೆದ್ದಿವೆ. ತಿಂಗಳ ಅವಧಿಯಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ನಡೆದಿದ್ದು, ರಾಜ್ಯವನ್ನೇ ದಿಗ್ಭ್ರಮೆಗೊಳಿಸಿದೆ. ಇದರಿಂದ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಅಮಾಯಕರೇ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದರು.

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಅಶ್ರಫ್ ಕಲಾಯಿ, ಶರತ್ ಮಡಿವಾಳ, ಹಮೀದ್, ಆಕಾಶ್ ಭವನ ಎಂಬ ಮೂವರು ಹಾಗೂ ಮತೀಯ ದ್ವೇಷ, ಪ್ರತೀಕಾರದ ಹೆಸರಿನಲ್ಲಿ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಬೆಳ್ಳಾರೆ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್ ಫಾಝೀಲ್ ಕೊಲೆಗಳು ನಡೆದಿದೆ ಎಂದು ತಿಳಿಸಿದರು.

ADVERTISEMENT

ಎರಡು ದಶಕಕ್ಕೂ ಹೆಚ್ಚು ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಸರಣಿ ಕೊಲೆಗಳು ನಡೆಯುತ್ತಲೇ ಇದ್ದು, ಇದು ಗಂಭೀರವಾದ ವಿಚಾರ. ಈ ಬಗ್ಗೆ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದ ಮೇಲೆ ರಾಜ್ಯದ ಜನತೆ ಭರವಸೆ ಇಟ್ಟು ಬಹುಮತದೊಂದಿಗೆ ಅಧಿಕಾರಕ್ಕೆ ತಂದಿದ್ದಾರೆ. ಕೋಮುವಾದವನ್ನು ಹಿಮ್ಮೆಟ್ಟಿಸುವ ಮುಖ್ಯ ಉದ್ದೇಶದೊಂದಿಗೆ ರಾಜ್ಯದ ಪ್ರಜ್ಞಾವಂತರು, ಪ್ರಗತಿಪರರು, ಜನಪರ ಚಳವಳಿಗಳು ಕಳೆದ ಚುನಾವಣೆಯಲ್ಲಿ ನಿಮ್ಮ ಪರವಾಗಿ ದೃಢವಾಗಿ ನಿಂತಿದ್ದರು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಸರ್ಕಾರದ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಕೋಮುವಾದ ಹೆಚ್ಚುತ್ತಿದೆ. ಸರಣಿ ಸಾವುಗಳು ಸಂಭವಿಸುತ್ತಿದೆ ಎಂದು ಆರೋಪಿಸಿದರು.

ಈ ಎಲ್ಲ ಬೆಳವಣಿಗೆ ನಡುವೆ ಸೌಹಾರ್ದ ಕರ್ನಾಟಕ ಜಿಲ್ಲಾ ಘಟಕವು ಜೂನ್ 20ರಂದು ಚಿಂತಕರು ಹಾಗೂ ಜನಪರ ಹೋರಾಟಗಾರರ ಸಮಾಲೋಚನ ಸಭೆ ನಡೆಸಿ, ಕೋಮು ಶಕ್ತಿಗಳಿಗೆ ಕಡಿವಾಣ ಹಾಕಲು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧಾರ ಕೈಗೊಂಡಿದ್ದು, 7 ಅಂಶಗಳ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಲೇಖಕಿ ರೂಪ ಹಾಸನ, ಪತ್ರಕರ್ತ ಆರ್‌.ಪಿ. ವೆಂಕಟೇಶಮೂರ್ತಿ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ದಲಿತ ಮುಖಂಡ ಎಚ್ .ಕೆ ಸಂದೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್, ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ದಲಿತ ಸಂಘರ್ಷ ಸಮಿತಿ ಮುಖಂಡ ರಾಜಶೇಖರ್ ಹುಲಿಕಲ್, ಮಾದಿಗ ದಂಡೋರ ಸಮಿತಿಯ ಬಿ.ಆರ್. ವಿಜಯಕುಮಾರ್, ಸಾಹಿತಿ ಹರೀಶ್ ಕಟ್ಟೆ ಬೆಳಗುಲಿ, ಪತ್ರಕರ್ತ ತೌಫಿಕ್ ಅಹಮದ್, ಟಿಪ್ಪು ಸಂಘರ್ಷ ಸಮಿತಿ ಆನ್ಸರ್, ಎಸ್‌ಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ರಮೇಶ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.