ADVERTISEMENT

ಮಾಲೇಕಲ್‌ ತಿರುಪತಿಯಲ್ಲಿ ವೈಕುಂಠ ಏಕಾದಶಿ

ಭಕ್ತರ ಅನುಕೂಲಕ್ಕಾಗಿ ಅರಸೀಕೆರೆಯಿಂದ ವಿಶೇಷ ಬಸ್‌ ಸೌಲಭ್ಯ: ಬೆಟ್ಟದಲ್ಲಿ ಸಿದ್ಧತೆಯ ಭರಾಟೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 5:58 IST
Last Updated 6 ಜನವರಿ 2020, 5:58 IST
ನಗರದ ಹೊರವಲಯದ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಹಾಗೂ ಗೋವಿಂದರಾಜ ಸ್ವಾಮಿ
ನಗರದ ಹೊರವಲಯದ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಹಾಗೂ ಗೋವಿಂದರಾಜ ಸ್ವಾಮಿ   
""

ಅರಸೀಕೆರೆ: ಹೊರವಲಯದ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ಜ. 6ರಂದು ಲಕ್ಷ್ಮೀವೆಂಕಟರಮಣ ಸ್ವಾಮಿಯ ವೈಕುಂಠ ಏಕಾದಶಿ ಮಹೋತ್ಸವ ಅದ್ಧೂರಿಯಿಂದ ಜರುಗಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಬೆಳಿಗ್ಗೆ ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗುತ್ತದೆ. ವೈಕುಂಠ ಮಂಟಪದಲ್ಲಿ ಲಕ್ಷ್ಮೀ ವೆಂಕಟರಮಣ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಂಚರಾಯಸ್ವಾಮಿ ಹಾಗೂ ಗುಂಡಮ್ಮ ದೇವರಿಗೆ ವಿಶೇಷ ಪೂಜೆ ನೆರವೇರಲಿದೆ. ಅರಸೀಕೆರೆ ಬಸ್ ನಿಲ್ದಾಣದಿಂದ ಮಾಲೇಕಲ್ ತಿರುಪತಿಗೆ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.

ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬೆಟ್ಟ

ಹಿನ್ನೆಲೆ: ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.ಚಿತ್ರದುರ್ಗದ ಪಾಳೇಗಾರ ವಂಶಕ್ಕೆ ಸೇರಿದ ತಿಮ್ಮಪ್ಪ ನಾಯಕ ತನ್ನ ಪರಿವಾರದೊಂದಿಗೆ ಆಂಧ್ರಪ್ರದೇಶದ ತಿರುಮಲ ಬೆಟ್ಟದ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆಂದು ಹೋಗುವ ಮಾರ್ಗ ಮಧ್ಯೆ ವಾಯುವಿಹಾರಕ್ಕೆಂದು ಅರಸೀಕೆರೆ ಸಮೀಪದ ಬೆಟ್ಟದ ತಪ್ಪಲಿನಲ್ಲಿರುವ ನಾಗಪುರಿ ಪಟ್ಟಣ (ಈಗ ಇಲ್ಲ) ದಲ್ಲಿ ರಾತ್ರಿ ವೇಳೆ ತಂಗುತ್ತಾನೆ. ರಾತ್ರಿ ತಿಮ್ಮಪ್ಪ ನಾಯಕನ ಕನಸಿನಲ್ಲಿ ಸ್ವಾಮಿ ಕಾಣಿಸಿಕೊಂಡು, ‘ತಿರುಮಲ ಬೆಟ್ಟಕ್ಕೆ ಹೋಗುವ ಅವಶ್ಯಕತೆ ಇಲ್ಲ. ಇದೇ ಬೆಟ್ಟದಲ್ಲಿ ದರ್ಶನ ನೀಡುವುದಾಗಿ’ ಅಶರೀರವಾಣಿ ನುಡಿದಿದೆ. ಬೆಳಿಗ್ಗೆ ಇಡೀ ಬೆಟ್ಟ ಹುಡುಕಿದರೂ ದೇವರ ದರ್ಶನ ಸಿಗಲಿಲ್ಲ. ಮತ್ತೆ ದೇವರಲ್ಲಿ ಪ್ರಾರ್ಥಿಸಿದಾಗ ಕನಸಿನಲ್ಲಿ ಕಾಣಿಸಿಕೊಂಡಸ್ವಾಮಿ, ‘ಈ ಬೆಟ್ಟದಲ್ಲಿ ತುಳಸಿಮಾಲೆ ಬಿಟ್ಟು ಹೋಗಿರುತ್ತೇನೆ. ಆ ತುಳಸಿಮಾಲೆ ಹಿಂಬಾಲಿಸಿಕೊಂಡು ಬಂದು, ಅದು ಎಲ್ಲಿ ಕೊನೆಗೊಂಡಿರುತ್ತದೋ ಅಲ್ಲಿ ನಿನಗೆ ದರ್ಶನ ನೀಡುತ್ತೇನೆ’ ಎಂದು ನುಡಿದಿದೆ. ತುಳಸಿಮಾಲೆ ಹಿಂಬಾಲಿಸಿಕೊಂಡು ಹೋದಾಗ ಬೆಟ್ಟದ ತುದಿಯಲ್ಲಿ ವಶಿಷ್ಠ ಮಹರ್ಷಿ ತಪಸ್ಸುಗೈದ ಸ್ಥಳದಲ್ಲೇ ಆಷಾಢ ಮಾಸದಲ್ಲಿ ತಿಮ್ಮಪ್ಪ ನಾಯಕನಿಗೆ ವೆಂಕಟರಮಣ ಸ್ವಾಮಿ ದರ್ಶನ ನೀಡಿದನಂತೆ. ದರ್ಶನಗೈದ ಸ್ಥಳದಲ್ಲೇ ತಿಮ್ಮಪ್ಪ ದೇವಾಲಯ ನಿರ್ಮಿಸಿದ. ಅಂದಿನಿಂದ ಈ ಬೆಟ್ಟಕ್ಕೆ ಮಾಲೇಕಲ್ ತಿರುಪತಿ ಎಂದು ನಾಮಾಂಕಿತವಾಯಿತು ಎಂಬ ಪ್ರತೀತಿ ಇದೆ.

ADVERTISEMENT

ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವರದರಾಜ್ ಮಾತನಾಡಿ, ‘ಸ್ವಾಮಿಯ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಬೆಂಗಳೂರಿನ ಭಕ್ತರೊಬ್ಬರು ಬೆಟ್ಟದ ಮೇಲೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.