ADVERTISEMENT

‘ವಸುಂಧರ’ ಕಾದಂಬರಿ ಲೋಕಾರ್ಪಣೆ

ಭಾಷಾ ಅಭಿವೃದ್ಧಿ ಪ್ರಾಧಿಕಾರದಿಂದ ಸಾಮರಸ್ಯ ಭಾವನೆ ಮೂಡಲಿದೆ:ಕೊಟ್ರೇಶ್‌ ಉಪ್ಪಾರ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 14:29 IST
Last Updated 22 ನವೆಂಬರ್ 2020, 14:29 IST
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಲೇಖಕಿ ಜಯಂತಿ ಚಂದ್ರಶೇಖರ್ ಅವರ "ವಸುಂಧರ’ ಕಾದಂಬರಿಯನ್ನು ಸಾಹಿತಿ ಎನ್. ಶೈಲಜಾ ಹಾಸನ ಬಿಡುಗಡೆ ಮಾಡಿದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಲೇಖಕಿ ಜಯಂತಿ ಚಂದ್ರಶೇಖರ್ ಅವರ "ವಸುಂಧರ’ ಕಾದಂಬರಿಯನ್ನು ಸಾಹಿತಿ ಎನ್. ಶೈಲಜಾ ಹಾಸನ ಬಿಡುಗಡೆ ಮಾಡಿದರು.   

ಹಾಸನ: ಭಾಷಾ ಸಾಮರಸ್ಯದ ದೃಷ್ಟಿಯ ಹಿನ್ನೆಲೆಯಲ್ಲಿ ಭಾಷಾಭಿವೃದ್ಧಿ ಪ್ರಾಧಿಕಾರಗಳು ಅಗತ್ಯವಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಜಯಂತಿ ಚಂದ್ರಶೇಖರ್ ಅವರ ’ವಸುಂಧರ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದ ಮರಾಠಿ, ತೆಲುಗು, ತಮಿಳು, ಮಲೆಯಾಳಿ ಭಾಷಿಗರಿಗೆ ಆಯಾಯ ಭಾಷಾ ಅಭಿವೃದ್ಧಿ ಪ್ರಾಧಿಕಾರಗಳನ್ನು ಸಂವಿಧಾನ ಬದ್ಧವಾಗಿ ಮಾಡಿದಾಗ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿಯೇ ಹುಟ್ಟಿ ಬೆಳೆದ ಕನ್ನಡಿಗರಿಗೆ ಆಯಾ ರಾಜ್ಯ ಸರ್ಕಾರಗಳು ಕರ್ನಾಟಕ ಸರ್ಕಾರದಂತೆ ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರ ರಚಿಸಿದರೆ ನಾಡು, ನುಡಿ, ಗಡಿ ಸಮಸ್ಯೆಗಳು ಕ್ಷೀಣವಾಗಿ ಪರಸ್ಪರ ಸಾಮರಸ್ಯ ಭಾವನೆ ಮೂಡುತ್ತದೆ ಎಂದು ಪ್ರತಿಪಾದಿಸಿದರು.

ADVERTISEMENT

ಕನ್ನಡ ಭಾಷೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಐತಿಹ್ಯವಿದ್ದು, ಜಗತ್ತಿನ ಬೆರಳೆಣಿಕೆಯ ಪುರಾತನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಇಂತಹ ಅಭೂತಪೂರ್ವ ಇತಿಹಾಸ ಹೊಂದಿರುವ ಕನ್ನಡಿಗರಿಗೆ ಕೇವಲ ನವೆಂಬರ್ ಮಾತ್ರ ರಾಜ್ಯೋತ್ಸವ ಆಗಬಾರದು. ನಿಜವಾದ ಕನ್ನಡಿಗನಿಗೆ ಅನುದಿನವೂ ಸಂಭ್ರಮ ಎಂದು ಹೇಳಿದರು.

ಕಾದಂಬರಿ ಬರೆಯಬೇಕಾದರೇ ಬಹಳ ತಾಳ್ಮೆ ಇರಬೇಕು. ಅಂತಹ ಶಕ್ತಿಯನ್ನು ಜಯಂತಿ ಚಂದ್ರಶೇಖರ್ ಹೊಂದಿದ್ದಾರೆ. ಇಷ್ಟು ವರ್ಷದಲ್ಲಿ ಒಂದು ಕಾದಂಬರಿ ಬರೆಯಲು ಸಾಧ್ಯವಾಗಿರುವುದಿಲ್ಲ ಎಂದರು.

ಜಯಂತಿ ಚಂದ್ರಶೇಖರ್ ರಚಿತ ’ವಸುಂಧರ’ ಕಾದಂಬರಿಯನ್ನು ಸಾಹಿತಿ ಎನ್. ಶೈಲಜಾ ಹಾಸನ ಬಿಡುಗಡೆ ಮಾಡಿದರು. ಜನಪದ ಕಲಾವಿದ ಗ್ಯಾರಂಟಿ ರಾಮಣ್ಣ ಅವರು ಕಾದಂಬರಿ ಕುರಿತು ಹಾಡು ಹಾಡಿ ಗಮನ ಸೆಳೆದರು. ನಂತರದಲ್ಲಿ ಕವಿಗೋಷ್ಠಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಜಯಂತಿ ಚಂದ್ರಶೇಖರ್, ಕೊಪ್ಪಳದ ಅಲ್ಲಾಗಿರಿರಾಜ್, ಸಾಹಿತಿ ಶಿವಮೊಗ್ಗದ ದಾಳೇಗೌಡ, ಸಾಹಿತಿ ವನಜಾ ಸುರೇಶ್, ನಾಗರಾಜ್ ಪಾಲ್ಗೊಂಡಿದ್ದರು. ಜಾವಗಲ್ ಪ್ರಸನ್ನ ಕುಮಾರ್ ನಿರೂಪಿಸಿದರೆ, ವಾಣಿ ನಾಗೇಂದ್ರ ಪ್ರಾರ್ಥಿಸಿದರು. ಸಿ.ಎನ್. ಉಷಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.