ADVERTISEMENT

ಮುನೀರಾ ಬೇಗಂಗೆ ವಾತ್ಸಲ್ಯದ ಮನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:00 IST
Last Updated 25 ಅಕ್ಟೋಬರ್ 2025, 5:00 IST
ಆಲೂರಿನ ದೊಡ್ಡಿಬೀದಿ ಮುನಿರಾ ಬೇಗಂ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು 
ಆಲೂರಿನ ದೊಡ್ಡಿಬೀದಿ ಮುನಿರಾ ಬೇಗಂ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು    

ಆಲೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಲೂರು ಘಟಕದ ವತಿಯಿಂದ ಪಟ್ಟಣದ ದೊಡ್ಡಿ ಬೀದಿ ವಾಸಿ ಮುನಿರಾ ಬೇಗಂ ಅವರಿಗೆ ನಿರ್ಮಿಸಲಾದ ‘ವಾತ್ಸಲ್ಯ’ ಮನೆ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಆಲೂರು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಇದು 3ನೇ ವಾತ್ಸಲ್ಯ ಮನೆಯಾಗಿದ್ದು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಬೇಗಂ, ಮನೆಯ ಫಲಕ ಅನಾವರಣ ಮಾಡುವ ಮೂಲಕ ಮನೆಯನ್ನು ಹಸ್ತಾಂತರ ಮಾಡಿದರು. ಗ್ರಾಮಾಭಿವೃದ್ಧಿ ಯೋಜನೆ ಮಾಡುವ ಜನಪರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಯೋಜನೆಯ ಕಾರ್ಯಕ್ರಮಗಳು ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಸನ ಜಿಲ್ಲೆಯ ನಿರ್ದೇಶಕ ಸುರೇಶ್ ಮೊಯಿಲಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಾಧಿಕಾರಿ ಹಾಗೂ ಹೇಮಾವತಿ ಅಮ್ಮನವರ ಮಾರ್ಗದರ್ಶನದ ಜ್ಞಾನ ವಿಕಾಸ ಕಾರ್ಯಕ್ರಮದಡಿ, ಸಮಾಜದ ಅತಿ ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬಗಳನ್ನು ಗುರುತಿಸಿ, ಅವರ ಜೀವನ ನಿರ್ವಹಣೆಗೆ ಬೇಕಾದ ಮಾಸಾಶನ ಹಾಗೂ ವಾತ್ಸಲ್ಯ ಕಿಟ್ ಕೊಡುವುದರೊಂದಿಗೆ ಸೂರು ಇಲ್ಲದವರಿಗೆ ಸ್ವಂತ ಸೂರು ನಿರ್ಮಾಣ ಮಾಡಿ ಕೊಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

ADVERTISEMENT

ಗ್ರಾಮದ ಜನರು ಯೋಜನೆಯ ಬಗ್ಗೆ ಅರಿತುಕೊಂಡು ಬದುಕು ಕಟ್ಟಿಕೊಳ್ಳಬೇಕು. ರಾಜ್ಯದಾದ್ಯಂತ ಇದುವರೆಗೆ 700ಕ್ಕೂ ಹೆಚ್ಚು ವಾತ್ಸಲ್ಯ ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು. 

ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಬಿ.ಧರ್ಮರಾಜ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾಡುವ ಕೆಲಸಗಳನ್ನು ಸರ್ಕಾರ ಕೂಡ ಮಾಡುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಜನಜಾಗೃತಿ ವೇದಿಕೆ ಸದಸ್ಯ ರಾಜಶೇಖರ್, ಎಂ.ಬಾಲಕೃಷ್ಣ, ಒಕ್ಕೂಟದ ಅಧ್ಯಕ್ಷ ಲಿಂಗರಾಜು ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಯವರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಪ್ರಗತಿಬಂಧು ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮದ ಗಣ್ಯರು, ಕ್ಷೇತ್ರ ಯೋಜನಾಧಿಕಾರಿ ಕೆ.ರತ್ನಾಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.