
ಹಾಸನ: ಮನುಷ್ಯನಲ್ಲಿ ಶಾಂತಿ ಇಲ್ಲದಿರುವುದನ್ನು ನೋಡಿದರೆ, ಮನುಷ್ಯ ಧರ್ಮ, ಸಂಸ್ಕೃತಿ ಪರಿಪಾಲನೆ ಮಾಡುತ್ತಿಲ್ಲ. ಜೀವನದ ಉನ್ನತಿಗೆ ಧರ್ಮ, ಸಂಸ್ಕೃತಿಗಳು ನೆರವಾಗುತ್ತವೆ. ಅದರ್ಶಪ್ರಾಯ ಜೀವನ ನಡೆಸಲು ಅವುಗಳ ಅಗತ್ಯವಿದೆ ಎಂದು ಬಾಳೆಹೋನ್ನೂರು ರಂಭಾಪುರಿ ಪೀಠದ ವೀರ ಸೋಮೇಶ್ವರ ರಾಜಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಟ್ಟಾಯ ಹೋಬಳಿ ಮುಟ್ಟನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವದ ಅಂಗವಾಗಿ ನಡೆದ ಅಡ್ಡಪಲ್ಲಕ್ಕಿ ಉತ್ಸವ, ಧಾರ್ಮಿಕ ಜಾಗೃತಿ ಸಭೆಯಲ್ಲಿ ಅವರು ಅಶೀರ್ವಚನ ನೀಡಿದರು.
ಆಡಳಿತ ನಡೆಸುವವರು ಎಲ್ಲ ಸಮುದಾಯದ ಬೆಳಗಣಿಗೆಗೆ ಯೋಚಿಸಬೇಕು. ಜಾತಿ, ಜಾತಿಗಳಲ್ಲಿಯೇ ಅಸಮಾಧಾನ ಉಂಟಾಗದಂತೆ ತಡೆಯಬೇಕು. ಎಲ್ಲ ವರ್ಗದವರ ಶ್ರೇಯಸ್ಸು, ಪ್ರಗತಿಗೆ ಶ್ರಮಿಸಬೇಕು. ಎಲ್ಲರೂ ವಿಚಾರವಂತರಾಗಿ ಬದುಕಬೇಕು ಎಂದರು.
‘ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಸಹಕಾರದಿಂದ ದೇವಸ್ಥಾನಕ್ಕೆ ಸರ್ಕಾರದಿಂದ ಧನಸಹಾಯ ಕೊಡಿಸಿದ್ದು ಸಹಕಾರಿಯಾಗಿದೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಟ್ಟನಹಳ್ಳಿ ಅವಧೂತ ಪ್ರವೀಣ್ ಗೂರೂಜಿ, ‘ಹಿಂದಿನ ಬಿಜೆಪಿ ಸರ್ಕಾರದ ಸಹಾಯಧನದಿಂದ ದೇವಸ್ಥಾನ ನಿರ್ಮಿಸಲು ಅನುಕೂಲವಾಗಿದೆ. ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು’ ಎಂದರು.
ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಜುವಳ್ಳಿಯ ಸದಾಶಿವ ಸ್ವಾಮೀಜಿ, ಯಸಳೂರಿನ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಡ್ಲಿಪೇಟೆಯ ಸದಾಶಿವ ಸ್ವಾಮೀಜಿ, ಶ್ರೀ ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಕೊಳ್ಳೆಗಾಲದ ಶಿವಮೂರ್ತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಬಿಜೆಪಿ ಮುಖಂಡ ಬೇಳೂರು ರಾಘವೇಂದ್ರ ಶೆಟ್ಟಿ, ಡಾ.ಧನಂಜಯ್ ಸರ್ಜಿ, ಅನಿಲ್ ಪಟೇಡ್, ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜೆಡಿಎಸ್ ಮುಖಂಡ ದ್ಯಾವೇಗೌಡ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಮುಖಂಡರಾದ ಎಚ್.ಎನ್. ನಾಗೇಶ್, ಮಾಂಗಿಲಾಲ್, ಹೇಮಪ್ರಕಾಶ್, ಶ್ರೀವತ್ಸ, ರಾಜಗೋಪಾಲ್ ಅಚಾರ್ಯ, ಪ್ರಸಾದ್ ಕೆ.ಹೊಸಕೋಟೆ, ಜಯಪ್ಪ ಮುಟ್ಟನಹಳ್ಳಿ, ಜಯಕುಮಾರ್, ಶೆಟ್ಟಿಹಳ್ಳಿ ಪಿಡಿಓ ಚಂದ್ರಮ್ಮ, ಪಂಚಾಯಿತಿ ಸದಸ್ಯ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.
ಯತೀಶ್ ನಿರೂಪಿಸಿದರು. ಗಣೇಶ್ ಶರ್ಮಾ ತಂಡದವರು ಪೂಜಾ ವಿಧಾನ ನೆರವೇರಿಸಿದರು. ಅರ್ಚಕರಾದ ಹರೀಶ್ ಶಾಸ್ತ್ರಿ, ಬಸವರಾಜ್, ಸಾವಿರಾರು ಭಕ್ತರು ಭಾಗವಹಿಸಿದ್ದರು. ಎರಡು ದಿನ ದಾಸೋಹ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.