ADVERTISEMENT

ಜಗತ್ತಿಗೆ ಶಿಕ್ಷಣ, ಸಂಸ್ಕೃತಿ ಕೊಟ್ಟ ಸಮಾಜ: ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ

ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:46 IST
Last Updated 10 ಆಗಸ್ಟ್ 2025, 4:46 IST
ಹಳೇಬೀಡಿನ ಪುಷ್ಪಗಿರಿಯ ಆಡಿಟೋರಿಯಂನಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ವಿಭಾಗ ಮಟ್ಟದ ಘಟಕಗಳ ಪದಾಧಿಕಾರಿಗಳ ಎರಡು ದಿನದ ಕಾರ್ಯಾಗಾರವನ್ನು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಉದ್ಘಾಟಿಸಿದರು. ಫಕೀರ ದಿಂಗಾಲೇಶ್ವರ ಸ್ವಾಮಿಜಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಹಳೇಬೀಡಿನ ಪುಷ್ಪಗಿರಿಯ ಆಡಿಟೋರಿಯಂನಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ವಿಭಾಗ ಮಟ್ಟದ ಘಟಕಗಳ ಪದಾಧಿಕಾರಿಗಳ ಎರಡು ದಿನದ ಕಾರ್ಯಾಗಾರವನ್ನು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಉದ್ಘಾಟಿಸಿದರು. ಫಕೀರ ದಿಂಗಾಲೇಶ್ವರ ಸ್ವಾಮಿಜಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.   

ಹಳೇಬೀಡು: ವೀರಶೈವ ಲಿಂಗಾಯತ ಎಂಬುದು ಜಗತ್ತಿಗೆ ಶಿಕ್ಷಣ ಹಾಗೂ ಸಂಸ್ಕ್ರತಿ ಸಮಾಜ. ವೀರಶೈವ ಮಹಾಸಭಾ ಕೂಡ ಸಮಾಜವನ್ನು ಮುನ್ನಡೆಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಪುಷ್ಪಗಿರಿಯ ಆಡಿಟೋರಿಯಂನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ವಿಭಾಗ ಮಟ್ಟದ ಪದಾಧಿಕಾರಿಗಳ ಎರಡು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ನಾವೇ ಶ್ರೇಷ್ಠರು ಎಂದು ಹೋರಾಟಗಳಾಗುತ್ತಿವೆ. ಇದರಿಂದ ದೇಶಗಳ ನಡುವೆ ಕಚ್ಙಾಟ ಬೆಳೆಯುತ್ತಿದೆ. ನಾವೆಲ್ಲರೂ ಶ್ರೇಷ್ಠರು ಎಂಬ ಭಾವನೆಯಿಂದ ಹೆಜ್ಜೆ ಇಟ್ಟರೆ, ಭೂಮಿಯಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕಬಹುದು ಎಂದು ಸ್ವಾಮೀಜಿ ಹೇಳಿದರು.

ADVERTISEMENT

ಸಂಸ್ಕೃತಿ ನಿರ್ಮಾಪಕರಾದ ಶರಣರು, ಎಲ್ಲರಿಗೂ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಎಲ್ಲರಿಗೂ ಸಮಾನತೆ ಸಾರಿದ್ದರು. ಮೇಲು– ಕೀಳು ಭಾವನೆಯನ್ನು ಕಿತ್ತೊಗೆದು, ಎಲ್ಲರನ್ನೂ ಸಮಾನವಾಗಿ ಮುನ್ನಡೆಸಿದ್ದರು. ವೀರಶೈವ ಲಿಂಗಾಯತ ಮಹಾಸಭಾ, ಶರಣರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಒಂದು ಗಂಟೆಯ ಪ್ರವಚನದಲ್ಲಿ ಸಭಿಕರ ಗಮನ ಸೆಳೆದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿ, ವಿವಿಧ ಸಮಾಜದ ಜನಸಂಖ್ಯೆ ಆಧಾರದ ಮೇಲೆ ಸರ್ಕಾರದ ಸೌಲಭ್ಯ ಹಂಚಿಕೆಯಾಗುತ್ತದೆ. ವೀರಶೈವ ಮಹಾಸಭಾ ನಿರ್ಧಾರ ಕೈಗೊಂಡು, ಹೇಳುವ ಮಾಹಿತಿಯನ್ನು ಎಲ್ಲರೂ ಮುಂದಿನ ಜನಗಣತಿಯಲ್ಲಿ ಪಾಲಿಸಬೇಕು ಎಂದರು.

ವೀರಶೈವ ಮಹಾಸಭಾ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರವಳ್ಳಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ವಿವಿಧ ಪಂಗಡಗಳು ಒಗ್ಗಟ್ಟಿನಿಂದ ಸಾಗಿದರೆ, ಸಮಾಜ ಬೆಳೆಯುತ್ತಿದೆ. ವೀರಶೈವ ಲಿಂಗಾಯತ ಅಭಿವೃದ್ದಿ ಮಂಡಳಿಯಿಂದ ಆಗುವ ಉಪಯುಕ್ತತೆಯ ಕುರಿತು ಕಾರ್ಯಾಗಾರದಲ್ಲಿ ಚರ್ಚೆಯಾಗುತ್ತಿದೆ ಎಂದರು.

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ ನವಿಲೆ, ಉಪಾಧ್ಯಕ್ಷೆ ಬಿ.ಕೆ.ಚಂದ್ರಕಲಾ, ರಾಜ್ಯ ಘಟಕದ ಉಪಾಧ್ಯಕ್ಷ ಗ್ರಾನೈಟ್ ರಾಜಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಬಸವರಾಜು, ಪತ್ರಕರ್ತ ಹೆಬ್ಬಾಳು ಹಾಲಪ್ಪ ಭಾಗವಹಿಸಿದ್ದರು.

ಕೃತಕ ಬುದ್ಧಿಮತ್ತ ಆಧಾರಿತ ವಚನ.ಕಾಂನಲ್ಲಿ ಅರ್ಥ ಸಹಿತ ವಚನಗಳನ್ನು ಅಳವಡಿಸಲಾಗಿದೆ. ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್‌ನಲ್ಲಿ ವಚನ ಸಾಹಿತ್ಯವನ್ನು ಸುಲಭವಾಗಿ ಅಧ್ಯಯನ ಮಾಡಬಹುದು.
-ಕೆ.ಆರ್.ಶಿವರಾಂ, ಡಿವೈನ್ ಅರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.