ADVERTISEMENT

ಲಸಿಕೆ ಪಡೆಯಲು ವಾಹನ ವ್ಯವಸ್ಥೆ

ಸಹಕರಿಸದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಸೂಚನೆ: ಸಚಿವ ಕೆ. ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 13:11 IST
Last Updated 17 ಏಪ್ರಿಲ್ 2021, 13:11 IST
ಹಾಸನದಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿದರು.
ಹಾಸನದಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿದರು.   

ಹಾಸನ: 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಉಸ್ತುವಾರಿ ಕೆ.ಗೋಪಾಲಯ್ಯ ಹೇಳಿದರು.

ಸಾರಿಗೆ ಮುಷ್ಕರ, ಕೊರೊನಾ 2ನೇ ಅಲೆ ಪಸರಿಸುವಿಕೆಯಿಂದಾಗಿ ಲಸಿಕೆ ಪಡೆಯಲು ಜನರು ಉತ್ಸಾಹ ತೋರುತ್ತಿಲ್ಲ. ಆದ್ದರಿಂದ ಆರೊಗ್ಯ ಇಲಾಖೆ ವತಿಯಿಂದಲೇ ಪಂಚಾಯಿತಿವಾರುವಾಹನ ಕಳುಹಿಸಿಕೊಡಲಾಗುತ್ತಿದ್ದು, ಜನರು ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬೇಕು ಎಂದುಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೋವಿಡ್ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕುಟುಂಬ ಜತೆಗೆ ಊರು ಉಳಿಯಬೇಕೆಂದರೆ ಕೆಲ ದಿನಗಳವರೆಗೆ ನಿಯಮ ಪಾಲಿಸಬೇಕಾಗುತ್ತದೆ. ಎಲ್ಲವನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಮಾಡಲಿ ಎಂದು ಸುಮ್ಮನಿರುವುದು ಸರಿಯಲ್ಲ ಎಂದರು.

ADVERTISEMENT

ಹಾಸನದ ಜನತೆಗೆ ಯಾವುದೇ ತೊಂದರೆಯಾಗದಂತೆ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ. ಹಿಮ್ಸ್‌ನಲ್ಲಿ 188 ಕೋವಿಡ್‌ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, 200 ಹಾಸಿಗೆಗಳು ಖಾಲಿ ಇವೆ. ಜತೆಗೆ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಹೊಳೆನರಸೀಪುರ ಹಾಗೂ ಅರಕಲಗೂಡಿನಲ್ಲಿ ಹೊಸದಾಗಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗುವುದು. ತಾಲ್ಲೂಕು ಕೇಂದ್ರಗಳಲ್ಲಿ ಇನ್ನಷ್ಟು ಲಸಿಕಾ ವಿತರಣೆ ಕೇಂದ್ರ ತೆರೆದು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಹೋಂ ಕ್ವಾರಂಟೈನ್‍ನಲ್ಲಿ ಇರುವವರಿಗೆ ಔಷಧ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕೊರೊನಾ ನಿಯಂತ್ರಣ ಕ್ರಮಗಳಿಗೆ ಅನುದಾನದ ಬೇಡಿಕೆಯಿದ್ದು, ಎಸ್‍ಡಿಆರ್‍ಎಫ್‍ನಿಂದ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಎರಡನೇ ಅಲೆ ಹೆಚ್ಚುತ್ತಿರುವುದರಿಂದ ವಸತಿ ನಿಲಯಗಳನ್ನು ಮುಚ್ಚುವಂತೆ ಸರ್ಕಾರದಆದೇಶವಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಜತೆಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ದೇವರಾಜ್‌, ಸಿಇಒ ಬಿ.ಎ.ಪರಮೇಶ್, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲ ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿಬಸವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.