ADVERTISEMENT

ವಿಜ್ಞಾನ ಕ್ಷೇತ್ರಕ್ಕೆ ಬಾರದ ನೊಬೆಲ್‌: ನರೇಂದ್ರನಾಯಕ್ ಬೇಸರ

ಪವಾಡ ಬಯಲು ತಜ್ಞ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 13:36 IST
Last Updated 22 ಜನವರಿ 2019, 13:36 IST
ಹಾಸನದ ನಿವೃತ್ತ ನೌಕರರ ಭವನದಲ್ಲಿ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು.
ಹಾಸನದ ನಿವೃತ್ತ ನೌಕರರ ಭವನದಲ್ಲಿ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು.   

ಹಾಸನ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟು ಬೆಳವಣಿಗೆ ಮತ್ತು ಸ್ವಾವಲಂಬನೆ ಸಾಧಿಸಿದೆ ಎಂಬುದರ ಮೇಲೆ ದೇಶದ ಅಭಿವೃದ್ಧಿ ನಿರ್ಧರಿತವಾಗುತ್ತದೆ ಎಂದು ಪವಾಡ ಬಯಲು ತಜ್ಞ ಪ್ರೊ.ನರೇಂದ್ರನಾಯಕ್ ಅಭಿಪ್ರಾಯಪಟ್ಟರು.

ನಗರದ ನಿವೃತ್ತ ನೌಕರರ ಭವನದಲ್ಲಿ ‘ಶ್ರಮ’ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯಗಳ ಕುರಿತು ಪಾತ್ರ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಸಾಧನೆಯನ್ನು ವಿಜ್ಞಾನದಲ್ಲಿ ಎಷ್ಟು ನೊಬೆಲ್ ಬಂದಿದೆ ಎಂಬುದರ ಆಧಾರದಲ್ಲಿ ಅಳೆಯಬೇಕು. ಈ ಹಿನ್ನಲೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಒಂದೇ ಒಂದು ನೊಬೆಲ್ ಪಾರಿತೋಷಕ ವಿಜ್ಞಾನ ಕ್ಷೇತ್ರದಲ್ಲಿ ಬಂದಿಲ್ಲ. ಇದು ಅವಮಾನಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಭಾರತವನ್ನು ಡೋಂಗಿ ಬಾಬಾಗಳು ನಿಯಂತ್ರಣ ಮಾಡುತ್ತಿದ್ದಾರೆ. ಅವರು ಸನ್ಯಾಸ ಧರ್ಮಕ್ಕೆ ವಿರುದ್ಧವಾಗಿ ಪವಾಡಗಳ ಮೂಲಕ ಜನರನ್ನು ವಂಚಿಸಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಕೊಂಡು ದೇಶವನ್ನು ಕಗ್ಗತ್ತಲೆಯಲ್ಲಿ ಇಟ್ಟಿದ್ದಾರೆ. ಇವರ ಪವಾಡಗಳನ್ನು ಬಯಲಿಗೆಳೆಯುವುದರ ಮೂಲಕ ದೇಶವನ್ನು ಮಾನವ ವಿರೋಧಿ ಚಟುವಟಿಕೆಗಳಿಂದ ಮುಕ್ತಗೊಳಿಸಬೇಕು’ ಎಂದು ನುಡಿದರು.

‘ಮಿಡ್ ಬ್ರೈನ್ ಆಕ್ಟಿವೇಟ್ ಮಾಡುವುದರ ಮೂಲಕ ಜ್ಞಾಪಕ ಶಕ್ತಿ ವೃದ್ಧಿಸುವ, ಕಣ್ಣು ಕಟ್ಟಿ ಬಣ್ಣ ಪತ್ತೆ ಹಚ್ಚುವ ಮತ್ತು ಓದುವ ಮೋಸದ ದಂದೆ ದೇಶವ್ಯಾಪಿ ನಡೆಯುತ್ತಿವೆ. ಕಣ್ಣಿಗೆ ಕಟ್ಟುವ ಬಟ್ಟೆ ದೋಷದಿಂದ ಕೂಡಿರುತ್ತದೆ ಮತ್ತು ಮಕ್ಕಳನ್ನು ಸುಳ್ಳು ಹೇಳುವ ಪ್ರಕ್ರಿಯೆಗೆ ಮಾನಸಿಕವಾಗಿ ಒಳಪಡಿಸಲಾಗುತ್ತದೆ. ಇದು ಮಾನವ ದ್ರೋಹ ಮಾತ್ರವಲ್ಲ ದೇಶ ದ್ರೋಹವೂ ಹೌದು’ ಎಂದು ಪ್ರತಿಪಾದಿಸಿದರು.

‘ಭಾರತದ ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಯಲ್ಲಪ್ಪಘಡ ಸುಬ್ಬರಾವ್ ನಮ್ಮವರಿಗೆ ಆದರ್ಶ ಆಗಲಿಲ್ಲ. ಕ್ಯಾನ್ಸರ್ ರೋಗಕ್ಕೆ ಕಿಮೋಥೆರಪಿ, ಆನೆಕಾಲು ರೋಗಕ್ಕೆ ಮದ್ದು ಕಂಡು ಹಿಡಿದರು. ಆದರೆ, ಬೂದಿ ಕೊಟ್ಟು ಜನರನ್ನು ಮಂಕುಬೂದಿ ಎರಚುವ ಸತ್ಯಸಾಯಿಬಾಬ ಈ ದೇಶಕ್ಕೆ ಮಹಾಪುರುಷ. ಇದು ಈ ದೇಶಕ್ಕೆ ಅಂಟಿರುವ ಅಜ್ಞಾನ’ ಎಂದು ವ್ಯಂಗ್ಯವಾಡಿದರು.

ಸಿದ್ದಗಂಗಾ ಮಠದ ಸ್ವಾಮೀಜಿ ಪವಾಡಗಳಿಗೆ ಬಲಿ ಬೀಳದೆ ಸನ್ಯಾಸ ಧರ್ಮಕ್ಕೆ ಪೂರಕವಾಗಿ ಸರಳವಾಗಿ ಬದುಕಿ ಸಾಮಾಜಿಕ ಸೇವೆ ಮಾಡಿದರು ಎಂದರು.

‘ವಾಸ್ತು ಎಂಬುದು ಯಾವ ವಿಜ್ಞಾನವೂ ಅಲ್ಲ, ವಾಸ್ತು ವಿನ್ಯಾಸವೂ ಅಲ್ಲ. ವ್ಯಾಪಾರಿ ಲಕ್ಷಣಗಳಿಂದ ಕೂಡಿದ ಮೂಢನಂಬಿಕೆ ಮತ್ತು ಪುರೋಹಿತಶಾಹಿಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ ಹಣ ತರುವ ದಂಧೆ. ದೇವರು-ದೆವ್ವ ಮೈಮೇಲೆ ಬರಲು ನಾಲ್ಕು ಕಾರಣಗಳು. ಒಂದು ವಿಟಮಿನ್ ಕೊರತೆಯಿಂದಾಗುವ ದೈಹಿಕ ಕಾರಣ, ಎರಡನೆಯದು ಮಾನಸಿಕ ಪ್ರಕ್ಷೋಭೆಗೆ ಒಳಗಾಗಿ ಭೀತಿಯಿಂದ ಅಪ್ಪಿಕೊಳ್ಳುವ ಮಾನಸಿಕ ಕಾರಣ. ಮೂರನೆಯದಾಗಿ ಸುಪ್ತಮನಸಿನ ಅತೃಪ್ತ ಭಾವನೆಗಳ ದಕ್ಕಿಸಿಕೊಳ್ಳುವ ಭ್ರಾಮಕ ಕಾರಣ ಮತ್ತು ಹಣ ಮಾಡುವ ದಂಧೆಯ ಭಾಗವಾಗಿ ಧರ್ಮಲೂಟಿ ಕಾರಣ’ ಎಂದು ವಿವರಿಸಿದರು.

ಹಸಿರಭೂಮಿ ಪ್ರತಿಷ್ಠಾನದ ಖಜಾಂಚಿ ಹಾಗೂ ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ‘ಶ್ರಮ’ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಧರ್ಮೆಶ್, ಅಹಮದ್ ಹಗರೆ, ಟ್ರಸ್ಟ್‌ ಕಾರ್ಯದರ್ಶಿ ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.