ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ನಗರನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ 1 ಗಂಟೆ ವೇಳೆಯಲ್ಲಿ ಹಸುಗಳನ್ನು ಕದಿಯಲು ಬಂದ ಮೂವರನ್ನು ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ಜಾನುವಾರು ಕಳ್ಳರ ವಿರುದ್ಧ ದೂರು ನೀಡಿದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಸುತ್ತಲಿನ ಕೆಲವು ಗ್ರಾಮಗಳಲ್ಲಿ ಹಸು, ಎಮ್ಮೆಗಳ ಕಳ್ಳತನ ನಿರಂತರವಾಗಿ ನಡೆಯುತ್ತಿತ್ತು. ಸೋಮವಾರ ರಾತ್ರಿ ಗ್ರಾಮದ ಮನೆ ಮುಂದೆ ಕಟ್ಟಿ ಹಾಕಿದ್ದ ಮೂರು ಎಮ್ಮೆಗಳನ್ನು ಬಿಚ್ಚಿಕೊಳ್ಳುತ್ತಿರುವಾಗ, ಸದ್ದು ಕೇಳಿದ ಅಕ್ಕಪಕ್ಕದ ಮನೆಯವರು ಎದ್ದು ಒಟ್ಟಾಗಿ ಬಂದಿದ್ದಾರೆ. ಎಮ್ಮೆ ಕದಿಯುತ್ತಿದ್ದ ನಾಲ್ವರಲ್ಲಿ ಒಬ್ಬ ಪರಾರಿ ಆಗಿದ್ದು, ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಹಾಗೂ ಸುತ್ತಲಿನ ಹಳ್ಳಿಯ ಜನರಿಗೆ ವಿಷಯ ತಿಳಿಸಿದ್ದಾರೆ.
ಹಸು, ಎಮ್ಮೆಗಳನ್ನು ಕಳೆದುಕೊಂಡಿದ್ದ ಸುತ್ತಲಿನ ಹತ್ತಾರು ಹಳ್ಳಿಗಳ ಹಾಗೂ ಪಕ್ಕದ ಕೆ.ಆರ್.ಪೇಟೆ, ಕೆ.ಆರ್. ನಗರ ತಾಲ್ಲೂಕಿನ ವಿವಿಧ ಹಳ್ಳಿಗಳ 500ಕ್ಕೂ ಹೆಚ್ಚು ಜನರು ನಗರನಹಳ್ಳಿಗೆ ಬಂದಿದ್ದು, ‘ನಮ್ಮ ಜಾನವಾರುಗಳನ್ನೂ ಇವರೇ ಕದ್ದಿದ್ದಾರೆ. ನಮ್ಮ ಹಳ್ಳಿಗೂ ಇದೇ ವಾಹನದಲ್ಲಿ ಬಂದಿದ್ದರು’ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ‘ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ. ಇಲ್ಲವಾದಲ್ಲಿ ನಮ್ಮ ವಶಕ್ಕೆ ನೀಡಿ ಎಂದು ಆಗ್ರಹಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಹೊಳೆನರಸೀಪುರ ಉಪವಿಭಾಗದ ಡಿವೈಎಸ್ಪಿ ಶಾಲೂ, ಸರ್ಕಲ್ ಇನ್‌ಸ್ಪೆಕ್ಟರ್ ಪ್ರದೀಪ್, ನಗರಠಾಣೆ ಸಬ್ ಇನ್‌ಸ್ಪೆಕ್ಟರ್ ಅಭಿಜಿತ್, ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್ ರಮೇಶ್, ಕಟ್ಟಿ ಹಾಕಿದ್ದ ಆರೋಪಿಗಳಾದ ಬೇರ್ಯದ ಮಹಮದ್ ಶಫಿ, ಜಬೀವುಲ್ಲಾ, ಕೆ.ಆರ್. ಪೇಟೆಯ ಪುನೀತ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳತನಕ್ಕೆ ಬಳಸಿದ್ದ ಲೈಲ್ಯಾಂಡ್ ದೋಸ್ತ್ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
‘ಬೇರ್ಯದ ಮೊಹಮದ್ ಶಫಿ, ಹಸು, ಎಮ್ಮೆಗಳ ಕಳ್ಳತನದ ಪ್ರಕರಣಗಳಲ್ಲಿ ಹಲವಾರು ಬಾರಿ ಬಂಧಿತನಾಗಿದ್ದು, ಜಾಮೀನು ಪಡೆದು ಹೊರ ಬಂದಿದ್ದಾನೆ. ಈತನ ವಿರುದ್ದ ರೌಡಿಶೀಟ್ ತೆರೆಯಲಾಗಿದೆ. ಆದರೂ ಈತನ ಉಪಟಳ ಹಾಗೂ ಜಾನುವಾರುಗಳ ಕಳ್ಳತನ ತಪ್ಪಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಭಾಗದಲ್ಲಿ ನಿರಂತರವಾಗಿ ಜಾನುವಾರು ಕಳ್ಳತನ ನಡೆಯುತ್ತಿದೆ. ಜನವರಿ 1ರಂದು ನಮ್ಮ ಮೂರು ಎಮ್ಮೆಗಳನ್ನು ಕದ್ದಿದ್ದರು. ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಲಿಲ್ಲಲೋಕೇಶ್ ಮೂಡಲ, ಮಾಯಗೌಡನಹಳ್ಳಿ ಗ್ರಾಮದ ನಿವಾಸಿ
2 ಗಬ್ಬದ ಎಚ್.ಎಫ್. ಹಸುಗಳು ಕಳ್ಳತನವಾಗಿತ್ತು. ರಂಗೇನಹಳ್ಳಿಯ ಕಲಾವತಿ ಎಂಬುವವರ ಹಸು ಕಳವಾಗುತ್ತು ದೂರು ನೀಡಿದರೂ ಹಳ್ಳಿಮೈಸೂರು ಠಾಣೆಯ ಪೊಲೀಸರು ದೂರು ದಾಖಲಿಸಿಲ್ಲಸತೀಶ್ಕುಮಾರ್ ಸಾಲಿಗ್ರಾಮ, ತಾಲ್ಲೂಕಿನ ಮೇಲೂರು ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.