ಆಲೂರು: ಮಳೆ ಬಾರದೆ ಬರಗಾಲ ತೀವ್ರವಾಗಿರುವುದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಎದುರಾಗಿ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜನರು ಯಗಚಿ ನದಿ ಮತ್ತು ಸ್ಥಳೀಯ ಕೊಳವೆ ಬಾವಿ ನೀರನ್ನು ಆಶ್ರಯಿಸಿದ್ದಾರೆ. ಯಗಚಿ ನದಿಯಲ್ಲಿ ನೀರಿನ ಹರಿವು ನಿಂತು ಒಂದು ತಿಂಗಳಾಯಿತು. ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಹನಿ ನೀರಿಗೂ ತತ್ವಾರ ಎದುರಾಗಿದೆ.
ಶಾಸಕ ಸಿಮೆಂಟ್ ಮಂಜು , ಹಾಸನ ಜಿಲ್ಲಾಧಿಕಾರಿ , ನದಿ ಪಾತ್ರದ ಗ್ರಾಮಸ್ಥರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಯಗಚಿ ಜಲಾಶಯದಿಂದ ನೀರನ್ನು ಹರಿ ಬಿಡುವಂತೆ ಕೋರಿ ಹೇಮಾವತಿ ಜಲಾಶಯ ಯೋಜನೆ ಪ್ರಾದೇಶಿಕ ಆಯಕ್ತರಿಗೆ ಪತ್ರ ಬರೆದಿದ್ದರು.
ಆಯುಕ್ತರು ಏ. 23 ರಂದು ಆದೇಶ ಹೊರಡಿಸಿ, ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಅಗತ್ಯಕ್ಕೆ ಅನುಗುಣವಾಗಿ, ಯಗಚಿ ಜಲಾಶಯದಿಂದ ಪ್ರತಿದಿನ 30 ಕ್ಯುಸೆಕ್‌ನಂತೆ ನೀರನ್ನು ನದಿ ಮೂಲಕ ಮೇ 8 ರವರೆಗೆ ಆಲೂರಿಗೆ ಹರಿದು ಬಿಡಲು ಆದೇಶ ನೀಡಿದ್ದಾರೆ.
ಆದರೆ ನದಿ ಬತ್ತಿರುವ ಕಾರಣ ಗುಂಡಿಗಳನ್ನು ತುಂಬಿಕೊಂಡು ನೀರು ಹರಿದು ಬರಬೇಕು. ನೀರು ಬಿಡುಗಡೆಯಾಗಿ ಐದು ದಿನಗಳಾದರೂ ನೀರು ಹುಣಸವಳ್ಳಿ ಬಳಿ ಇರುವ ಚೆಕ್ ಡ್ಯಾಂ ವರೆಗೆ ಹರಿದು ಬಂದಿಲ್ಲ. ಒಂದೆರಡು ದಿನಗಳಲ್ಲಿ ನೀರು ಚೆಕ್ ಡ್ಯಾಂ ತಲುಪಬಹುದು ಎಂಬ ಮಾಹಿತಿ ಲಭಿಸಿದೆ.
ನೀರು ಚೆಕ್ ಡ್ಯಾಂ ತಲುಪಿದ ಕೂಡಲೇ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಸೆಸ್ಕ್ , ನೀರಾವರಿ ಇಲಾಖೆ, ನದಿ ಪಾತ್ರದ ರೈತರು ಕುಡಿಯಲು ಮಾತ್ರ ನೀರು ಬಳಸಿ ಸಹಕರಿಸಬೇಕು. ಜನ ಸಾಮಾನ್ಯರು ಹನಿ ನೀರನ್ನು ಸಹ ದುರುಪಯೋಗ ಪಡಿಸಬಾರದು ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಎಂಜಿನಿಯರ್ ಕವಿತಾ ರವರು.
ನದಿ ಪಾತ್ರದಲ್ಲಿರುವ ರೈತರು ಶುಂಠಿ, ಬಾಳೆ, ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ರೈತರು ಕೃಷಿ ಮಾಡಿದರೆ ಮಾತ್ರ ಜನಸಾಮಾನ್ಯರು ಬದುಕಲು ಸಾಧ್ಯ. ನದಿಯಲ್ಲಿ ಹರಿದು ಬರುವ ನೀರನ್ನು ರೈತರು ಹನಿ ನೀರನ್ನೂ ಪೋಲು ಮಾಡದೆ ಬಳಸುತ್ತಿದ್ದಾರೆ. ನೀರು ಅಲ್ಲಲ್ಲಿರುವ ಗುಂಡಿಗಳನ್ನು ತುಂಬಿಕೊಂಡು ಹರಿದು ಬರಬೇಕಾಗಿರುವುದರಿಂದ ಸಂಜೆ ವೇಳೆಗೆ ನೀರು ಚೆಕ್ ಡ್ಯಾಂ ತಲುಪುತ್ತದೆ. ರೈತರ ಉಳಿವಿಗೂ ಎಲ್ಲರೂ ಸಹಕರಿಸಬೇಕು ಎನ್ನುತ್ತಾರೆ ರೈತ ಮುಖಂಡರಾದ ಹೆಚ್. ಬಿ. ಧರ್ಮರಾಜ್ ರವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.