ಬೇಲೂರು: ತಾಲ್ಲೂಕಿನ ಹಾಲ್ತೋರೆ ಜಾಕ್‌ವೆಲ್‌ನಿಂದ ಹಳೇಬೀಡು ಮತ್ತು ಮಾದೀಹಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸಲು ಪುಷ್ಪಗಿರಿ ಸೋಮಶೇಖರ ಸ್ವಾಮೀಜಿ ಮತ್ತು ಶಾಸಕ ಎಚ್.ಕೆ.ಸುರೇಶ್ ಬುಧವಾರ ಚಾಲನೆ ನೀಡಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಚಾನೆಲ್‌ಗಳನ್ನು ಸ್ವಚ್ಛ ಮಾಡುವುದರ ಜೊತೆಗೆ ರೈತರು ಬೆಳೆಯುವ ಬೆಳೆಗಳಿಗೆ ಸಕಾಲದಲ್ಲಿ ನೀರನ್ನು ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು .
‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ₹15 ಕೋಟಿ ವೆಚ್ಚದಲ್ಲಿ ಯಗಚಿ ಏತ ನೀರಾವರಿ ನಿರ್ಮಾಣವಾಗಿದೆ. ಅಂದಿನಿಂದ ಇಂದಿನ ತನಕ ಜಾಕ್‌ವೆಲ್ ಬಳಿ ಕನಿಷ್ಠ ರಸ್ತೆ ಹಾಗೂ ಮೂಲ ಸವಲತ್ತುಗಳನ್ನು ನೀಡಿಲ್ಲ. ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದ್ದು, ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ರಣಘಟ್ಟ ಯೋಜನೆ ಮಂದಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ’ ಎಂದರು.
ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ರಣಘಟ್ಟ ಯೋಜನೆ ತೀವ್ರ ವಿಳಂಬವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಅಲ್ಲದೆ ಹಳೇಬೀಡು ಮತ್ತು ಮಾದೀಹಳ್ಳಿ ಹೋಬಳಿಗೆ ಹರಿಯುವ ಕಾಲುವೆ ಸ್ವಚ್ಛತೆಗೆ ಮುಂದಾಗಬೇಕು’ ಎಂದರು.
ರೈತ ಸಂಘದ ಮುಖಂಡ ಕುಮಾರ್, ಬಿಜೆಪಿ ಮುಖಂಡರಾದ ಆನಂದ್, ವಿಜಯಕುಮಾರ್, ಡಿಶಾಂತ್, ಸೋಮಣ್ಣ, ಪರಮೇಶ್, ಯಗಚಿ ನಿಗಮದ ಎಂಜಿನಿಯರ್ ದಯಾನಂದ, ಪ್ರವೀಣ್, ನವೀನ್ ಇದ್ದರು.
‘ಶಂಕುಸ್ಥಾಪನೆಯಲ್ಲ ಕಾಂಗ್ರೆಸ್ ಸಮಾವೇಶ’ ‘ಅರಸಿಕೆರೆಯಲ್ಲಿ ನಡೆದದ್ದು ಶಂಕುಸ್ಥಾಪನೆ ಕಾರ್ಯಕ್ರಮವಲ್ಲ ಬದಲಾಗಿ ಅದು ಕಾಂಗ್ರೆಸ್ ಸಮಾವೇಶ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ನಡುವಿನ ಕದನದಲ್ಲಿ ಜನರ ದಾರಿ ತಪ್ಪಿಸಲು ಮಾಡಿದ ಕಾರ್ಯಕ್ರಮ’ ಎಂದು ಶಾಸಕ ಎಚ್.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ‘ಜಿಲ್ಲೆಗೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕಾಲದಲ್ಲಿ ಆದ ಕೆಲಸಗಳನ್ನು ಈಗಿನ ಸರ್ಕಾರ ಶಂಕುಸ್ಥಾಪನೆ ಮಾಡುತ್ತಿದೆ. ಜಿಲ್ಲೆಗೆ ₹500 ಕೋಟಿ ಅನುದಾನ ನೀಡಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿಯ ಭಾಷಣ ಕೇವಲ ರಾಜಕೀಯ ಗಿಮಿಕ್. ಸರ್ಕಾರದ ಹಣದಲ್ಲಿ ಸಮಾವೇಶ ಮಾಡಲಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.