ಚನ್ನರಾಯಪಟ್ಟಣದಲ್ಲಿ ಕಾಣಿಸಿದ ಕಾಡುಕೋಣವನ್ನು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಶನಿವಾರ ಸೆರೆಹಿಡಿಯಲಾಯಿತು
ಚನ್ನರಾಯಪಟ್ಟಣ: ಪಟ್ಟಣದ ಬಾಗೂರು ರಸ್ತೆ, ಕುವೆಂಪುನಗರ, ಗಣೇಶನಗರದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿ, ಮಹಿಳೆಯೊಬ್ಬರಿಗೆ ತಿವಿದಿದ್ದ ಕಾಡು ಕೋಣವನ್ನು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ.
ಗಣೇಶನಗರದ ಶಾಂತಮ್ಮ ಎಂಬುವರ ಹೊಟ್ಟೆಗೆ ಕಾಡುಕೋಣ ತಿವಿದಿದೆ. ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆ ಮತ್ತು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಗಾಯಾಳು ಶಾಂತಮ್ಮ ಅವರನ್ನು ದಾಖಲಿಸಲಾಗಿದೆ.
ಶುಕ್ರವಾರ ರಾತ್ರಿ ಬಾಗೂರು ರಸ್ತೆಯಲ್ಲಿ ಕಾಡುಕೋಣ ಅಡ್ಡಾಡುತ್ತಿದ್ದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಕಾಡುಕೋಣ ಶನಿವಾರ ಬೆಳಿಗ್ಗೆ ಕುವೆಂಪುನಗರ, ಗಣೇಶನಗರದಲ್ಲಿ ಕಾಣಿಸಿತು. ಕಾಡುಕೋಣವನ್ನು ವೀಕ್ಷಿಸಲು ಜನರು ಕುತೂಹಲದಿಂದ ಗುಂಪು ಗುಂಪಾಗಿ ಸೇರಿದರು. ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿ, ವಿಡಿಯೊ ಮಾಡಿಕೊಂಡರು.
ಕಾಡುಕೋಣ ಕಾಣಿಸಿದ ವಿಷಯ ತಿಳಿಯುತ್ತಿದ್ದಂತೆ ಹಾಸನ ಜಿಲ್ಲೆಯ 9 ಅರಣ್ಯ ವಲಯದಿಂದ 100 ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ, ಕಾಡುಕೋಣ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಡ್ರೋಣ್ ಸಿಬ್ಬಂದಿ, ಸ್ಥಳೀಯ ಪೊಲೀಸರು ಮತ್ತು ಆಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಜನವಸತಿ ಪ್ರದೇಶದಲ್ಲಿ ಕಾಡುಕೋಣ ಇದುದ್ದರಿಂದ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಯಿತು. ಕೋಣವನ್ನು ನೋಡಲು ಸೇರುತ್ತಿದ್ದ ಜನರನ್ನು ತಹಬದಿಗೆ ತರುವುದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿತು. ಕೋಣಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಕ್ರೈನ್ ಸಹಾಯದಿಂದ ಲಾರಿಗೆ ಹತ್ತಿಸಲಾಗಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲೇ ಕೋಣ ಚೇತರಿಸಿಕೊಂಡು ಲಾರಿಯಿಂದ ಕೆಳಕ್ಕೆ ಹಾರಿ, ಅತ್ತಿತ್ತ ಓಡಾಡಿತು. ಪುನಃ ಅರಿವಳಿಕೆ ನೀಡಿ, ಸೆರೆಹಿಡಿದು ಲಾರಿಯಲ್ಲಿ ಸಾಗಿಸಲಾಯಿತು. ಪಶ್ಚಿಮಘಟ್ಟದ ಕಾಡಿಗೆ ಬಿಡಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಅಂದಾಜು 5ರಿಂದ 8 ವರ್ಷ ಪ್ರಾಯದ ಕಾಡುಕೋಣ ಮಡಿಕೇರಿ ಅರಣ್ಯದಿಂದ ಅರಕಲಗೂಡು ಮೂಲಕ ಈ ಭಾಗಕ್ಕೆ ಬಂದಿರುವ ಸಾಧ್ಯತೆ ಇದೆ. ಕಳೆದ 15 ದಿನಗಳ ಹಿಂದೆ ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ನಿತ್ಯ 3-4 ಕಿ.ಮೀ ಸಂಚರಿಸುತ್ತಿತ್ತು. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಾಡುಕೋಣ ಕಾಣಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಸಿಎಫ್ ಸೌರಭ್‍ಕುಮಾರ್, ಎಸಿಎಫ್ ಖಲಂದರ್ ಸೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಬಂಡಿಪುರ ಅಭಯಾರಣ್ಯದ ಪಶು ವೈದ್ಯ ಡಾ.ವಾಸೀಂ, ಶಾರ್ಪ್‍ಶೂಟರ್ ಅಕ್ರಂ, ಚಿಕ್ಕಮಗಳೂರು ಅರಣ್ಯವಲಯದ ಪಶುವೈದ್ಯ ಡಾ. ಆದರ್ಶ್ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.