ADVERTISEMENT

ಹೆತ್ತೂರು: ಮುಖ್ಯರಸ್ತೆಯಲ್ಲಿ ಓಡಾಡಿದ ಕಾಡಾನೆ; ಆತಂಕ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:18 IST
Last Updated 24 ಆಗಸ್ಟ್ 2025, 4:18 IST
ಹೆತ್ತೂರು ಗ್ರಾಮದ ಶ್ರೀಕಂಠಯ್ಯ ಅವರ ತೋಟದಲ್ಲಿ ಇಟ್ಟಿದ ಮೋಟಾರ್‌ಗೆ ಕಾಡಾನೆ ಹಾನಿ ಮಾಡಿದೆ.
ಹೆತ್ತೂರು ಗ್ರಾಮದ ಶ್ರೀಕಂಠಯ್ಯ ಅವರ ತೋಟದಲ್ಲಿ ಇಟ್ಟಿದ ಮೋಟಾರ್‌ಗೆ ಕಾಡಾನೆ ಹಾನಿ ಮಾಡಿದೆ.   

‌‌ಹೆತ್ತೂರು: ಸಮೀಪದ ಹಳ್ಳಿಬಯಲು– ಆಡ್ರಹಳ್ಳಿ ಮುಖ್ಯ ರಸ್ತೆಯಲ್ಲಿ ಹಗಲಿನಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಸುತ್ತಲಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಬೆಳಿಗ್ಗೆ 8ರ ಸುಮಾರಿಗೆ ಒಂಟಿ ಕಾಡಾನೆ ಕಾಫಿ ತೋಟದಿಂದ ರಸ್ತೆಗೆ ಬಂದಿದ್ದು, ಹೊಂಗಡಹಳ್ಳ ಹೋಗುವ ಬಸ್‌ಗೆ ಅಡ್ಡ ನಿಂತು, ಕೆಲ ಕಾಲ ರಸ್ತೆಯಲ್ಲಿ ಸಂಚರಿಸಿ, ಬಳಿಕ ಪಕ್ಕದ ಕಾಫಿ ತೋಟಕ್ಕೆ ತೆರಳಿದ ವಿಡಿಯೊ ಜಾಲತಾಣದಲ್ಲಿ ಹರಿದಾಡಿದೆ. ಇದರಿಂದ ಬಾಚ್ಚಿಹಳ್ಳಿ, ವನಗೂರು, ಹೆತ್ತೂರು, ಅತ್ತಿಹಳ್ಳಿ ಭಾಗದ ಜನರಿಗೆ ಆತಂಕ ಎದುರಾಗಿದ್ದು, ಶಾಶ್ವತ ಪರಿಹಾರ ರೂಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಭಾಗದಿಂದ ವಿದ್ಯಾರ್ಥಿಗಳು ಶಾಲೆಗೆ, ಜಮೀನಿಗೆ ರೈತರು, ಸಾರ್ವಜನಿಕರು ನಡೆದು ಸಾಗುವವರಿದ್ದು, ಬೆಳಗಿನ ವೇಳೆ ತಿರುಗಾಡಲು ಭಯಭೀತರಾಗಿದ್ದಾರೆ.

ADVERTISEMENT

'ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಲ್ಲದೇ, ಕಾಫಿ ತೋಟಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಹೆತ್ತೂರು ಗ್ರಾಮದ ಶ್ರೀಕಂಠಯ್ಯ ಎಚ್.ಕೆ. ಅವರು ನೀರಾವರಿಗೆ ಇಟ್ಟಿದ ಮೋಟಾರ್‌, ಪಂಪ್‌ಗಳಿಗೆ ಹಾನಿ ಮಾಡಿವೆ. ಅರಣ್ಯ ಇಲಾಖೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು’ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಖಚಾಂಚಿ ಎಂ.ಜೆ. ಸಚ್ಚಿನ್ ಒತ್ತಾಯಿಸಿದ್ದಾರೆ‌

ಉಪವಲಯ ಅರಣ್ಯ ಅಧಿಕಾರಿ ರಾಘವೇಂದ್ರ, ‘ಪ್ರಸ್ತುತ ಆನೆಗಳು ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರು ಕುಮಾರ್ ಅವರ ಕಾಫಿ ತೋಟದ ಸಮೀಪ ಬೀಡು ಬಿಟ್ಟಿದ್ದು, ಅವುಗಳನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸ್ಥಳಕ್ಕೆ ಆನೆ‌ ಕಾರ್ಯಪಡೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.