ADVERTISEMENT

ಕಾಂಗ್ರೆಸ್‌ ಸರ್ಕಾರದಿಂದ ಜನಾದೇಶಕ್ಕೆ ದ್ರೋಹ: ಶಾಸಕ ಸಿಮೆಂಟ್‌ ಮಂಜು

ಕೇವಲ ಸಮಾವೇಶದಿಂದ ಜನರ ಮನಸ್ಸು ಗೆಲ್ಲಲಾಗದು: ಶಾಸಕ ಸಿಮೆಂಟ್‌ ಮಂಜು

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:17 IST
Last Updated 19 ಮೇ 2025, 14:17 IST
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೊರತಂದಿರುವ ಕರಪತ್ರಗಳನ್ನು ಶಾಸಕ ಸಿಮೆಂಟ್‌ ಮಂಜು ಸೋಮವಾರ ಹಾಸನದಲ್ಲಿ ಬಿಡುಗಡೆ ಮಾಡಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೊರತಂದಿರುವ ಕರಪತ್ರಗಳನ್ನು ಶಾಸಕ ಸಿಮೆಂಟ್‌ ಮಂಜು ಸೋಮವಾರ ಹಾಸನದಲ್ಲಿ ಬಿಡುಗಡೆ ಮಾಡಿದರು.   

ಹಾಸನ: ‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾವೇಶ ಮಾಡಿದರೆ ಸಾಲದು, ಅಭಿವೃದ್ಧಿ ಕೆಲಸ ಮಾಡುವುದು ಮುಖ್ಯ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಕನ್ನಡಿಗರ ಬದುಕಿಗೆ ಶಾಪವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ದುಸ್ಥಿತಿಯತ್ತ ಸಾಗಿದ್ದು, ಹಿಂದೆಂದೂ‌ ಕಾಣದ ವಸೂಲಿ ಸರ್ಕಾರವನ್ನು ಜನ ನೋಡುವಂತಾಗಿದೆ’ ಎಂದು ಟೀಕಿಸಿದರು.

‘ರಾಜ್ಯ ಇಂದು ಆರ್ಥಿಕ ದಿವಾಳಿಯಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾಮಾಜಿಕ ನ್ಯಾಯದ ಕಗ್ಗೊಲೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಜನರು ನಲುಗಿದ್ದಾರೆ. ಈ ರೀತಿಯ ಆಡಳಿತ ಮೂಲಕ ಕಾಂಗ್ರೆಸ್‌ ಸರ್ಕಾರ ಜನಾದೇಶಕ್ಕೆ ದ್ರೋಹ ಎಸಗಿದಂತಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಹಗರಣಗಳ ಸುರಿಮಳೆಯನ್ನೇ ಮಾಡಿದೆ. ಶೇ 60 ಕಮಿಷನ್ ಸರ್ಕಾರ ಎಂಬ ಕಪ್ಪುಚುಕ್ಕಿ ಅಂಟಿಕೊಂಡಿದೆ. ಪ್ರತಿ ಟೆಂಡರ್‌ನಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ಈ ಮೂಲಕ ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತಿಸಿದ್ದು, ಕರ್ನಾಟಕದಲ್ಲಿ ಲೂಟಿ ಮಾಡಿದ ಹಣವನ್ನು ಹೈಕಮಾಂಡ್‌ ಮತ್ತು ಇತರ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸುತ್ತಿದೆ’ ಎಂದು ದೂರಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಮುಡಾ ನಿವೇಶನ ಹಗರಣವಿದೆ. ಸರ್ಕಾರದ ಸಚಿವರ ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ ಹಗರಣ ಮಾಡಿದ್ದಾರೆ. ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ₹15,568 ಕೋಟಿ ಹಗರಣದ ಶಂಕೆ ಇದೆ. ಇವೆಲ್ಲವೂ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಉದಾಹರಣೆಗಳಾಗಿವೆ’ ಎಂದು ಲೇವಡಿ ಮಾಡಿದರು.

‘ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಹಾಲು, ನೀರು, ವಿದ್ಯುತ್, ಡೀಸೆಲ್, ವಿವಿಧ ತೆರಿಗೆ ಮತ್ತು ಶುಲ್ಕಗಳ ವಿಪರೀತ ಹೆಚ್ಚಳದಿಂದಾಗಿ ಬಡವರು, ಮಧ್ಯಮ ವರ್ಗದವರು ಸಂಕಷ್ಟಕೀಡಾಗಿದ್ದಾರೆ. ಜನಸಾಮಾನ್ಯರ ಬದುಕೇ ಸಂಪೂರ್ಣ ದುಸ್ತರವಾಗಿದೆ’ ಎಂದು ಟೀಕಿಸಿದರು.

‘ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು 10 ತಿಂಗಳಲ್ಲೇ 697 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರೆಲ್ಲ ಪರಿಹಾರಕ್ಕಾಗಿಯೇ ಸಾಯುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲರ ಬೇಜವಾಬ್ದಾರಿ, ಅಮಾನವೀಯ ಹೇಳಿಕೆ ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಆರೋಗ್ಯ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಸಾವು ಹೆಚ್ಚಾಗಿದೆ. ಆರೋಗ್ಯ ಇಲಾಖೆಯಲ್ಲಿ 2600 ವೈದ್ಯರು, ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಇಲ್ಲದಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದು ಆಡಳಿತ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ’ ಎಂದು ದೂರಿದರು.

‘ಬ್ರಾಂಡ್ ಬೆಂಗಳೂರು ಎನ್ನುತ್ತಾರೆ. ಆದರೆ ಇಂದು ರಾಜಧಾನಿಯೇ ದುಸ್ಥಿತಿಯಲ್ಲಿದೆ. ಗುಂಡಿ ಬಿದ್ದ ರಸ್ತೆ, ಕಸದ ದುರ್ವಾಸನೆ,  ಕುಡಿಯುವ ನೀರಿಲ್ಲದ ರಾಜಧಾನಿ ನಲುಗಿದ್ದು, ಬ್ರಾಂಡ್ ಬೆಂಗಳೂರು ಕೇವಲ ಪೊಳ್ಳು ಭರವಸೆಯಾಗಿದೆ. ಕೊಲೆ, ಅತ್ಯಾಚಾರ, ಡ್ರಗ್ಸ್ ಹಾವಳಿ, ಮಹಿಳೆಯರು, ಮಕ್ಕಳಿಗೆ ರಕ್ಷಣೆ ಶೂನ್ಯವಾಗಿದೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಖಜಾಂಚಿ ಶೋಭನ್ ಬಾಬು, ನಗರ ಘಟಕದ ಅಧ್ಯಕ್ಷ ಯೋಗೇಶ್, ಗಿರೀಶ್ ಇದ್ದರು.

‘7 ಬಾರಿ ಬಂದರೆ ಸಾಕೆ?’

ಜಿಲ್ಲೆಗೆ ಇದುವರೆಗೂ 7 ಬಾರಿ ಭೇಟಿ ನೀಡಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ಆದರೆ ಬಂದ ನಂತರ ಕ್ಷೇತ್ರದಲ್ಲಿ ಕೆಲಸ ಆಗಬಾರದೇ? ಆನೆ ಹಾವಳಿ ನಿಯಂತ್ರಣ ಆಗಬಾರದೆ? ಕೇವಲ ಬಂದು ಹೋದ ಲೆಕ್ಕ ಹೇಳಿದರೆ ಸಾಕೇ’ ಎಂದು ಶಾಸಕ ಶಾಸಕ ಸಿಮೆಂಟ್‌ ಮಂಜು ಪ್ರಶ್ನಿಸಿದರು. ‘ಅರಣ್ಯ ಇಲಾಖೆಯಲ್ಲಿ ಇಟಿಎಫ್ ಎಸಿಎಫ್‌ಗಳಿಗೆ ಸಮರ್ಪಕ ವಾಹನವಿಲ್ಲದೆ ಪರದಾಡುವಂತಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಕಾಡಾನೆ ಸಮಸ್ಯೆ ಇದೆ ಎಂದು ಗ್ರಾಮಸ್ಥರು ದೂರವಾಣಿ ಕರೆ ಮಾಡಿದರೆ ಸರ್ಕಾರಕ್ಕೆ ಹಾಗೂ ನಿಮ್ಮ ಶಾಸಕರಿಗೆ ತಿಳಿಸಿ ಎಂದು ಉಡಾಫೆಯ ಉತ್ತರ ನೀಡುತ್ತಿರುವ ಹಲವು ಉದಾಹರಣೆಗಳನ್ನು ಕಂಡಿದ್ದೇನೆ’ ಎಂದರು. ‘ಈ ಸಂಬಂಧ ಕಳೆದ ಬಾರಿಯ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದೇನೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

‘ಆಲೂರು– ಸಕಲೇಶಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಇದುವರೆಗೆ ಕೇವಲ ₹20 ಕೋಟಿ ಬಿಡುಗಡೆಯಾಗಿದ್ದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಂತಾಗಿದೆ’ ಎಂದು ಶಾಸಕ ಸಿಮೆಂಟ್ ಮಂಜು ಟೀಕಿಸಿದರು. ‘ಶಾಸಕರ ನಿಧಿಯಾಗಿ ₹4 ಕೋಟಿ ಆರ್‌ಡಿಪಿಆರ್ ಇಲಾಖೆಗೆ ₹10 ಕೋಟಿ ಎಸ್‌ಸಿಪಿ ಟಿಎಸ್‌ಪಿ ₹2 ಕೋಟಿ ಸಣ್ಣ ನೀರಾವರಿ ಇಲಾಖೆಗೆ ₹1 ಕೋಟಿ ಸೇರಿದಂತೆ ಸುಮಾರು ₹20 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ 120 ಕಿ.ಮೀ. ವ್ಯಾಪ್ತಿ ಇರುವ ಕ್ಷೇತ್ರದ ಅಭಿವೃದ್ಧಿಗೆ ಇಷ್ಟು ಹಣ ಸಾಕೆ? 48 ಪಂಚಾಯಿತಿಗಳು ಒಂದು ಪುರಸಭೆ ಒಂದು ಪಟ್ಟಣ ಪಂಚಾಯಿತಿಗೆ ಇಷ್ಟು ಹಣ ಸಾಕಾಗಲಿದೆಯೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.