ADVERTISEMENT

ಯಾರಿಗೂ ಅಧಿಕಾರ ಶಾಶ್ವತ ಅಲ್ಲ

ಶಾಸಕ ರೇವಣ್ಣ ಕಾರ್ಯವೈಖರಿ ವಿರುದ್ಧ ಪ್ರೀತಂ ಗೌಡ ನೇರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 14:24 IST
Last Updated 3 ಆಗಸ್ಟ್ 2019, 14:24 IST
ಪ್ರೀತಂ ಗೌಡ
ಪ್ರೀತಂ ಗೌಡ   

ಹಾಸನ: ‘ಕೇವಲ ಯಾವುದೋ‌ ಒಂದು ಪ್ರದೇಶದಲ್ಲಿ ₹400-500 ಕೋಟಿ ವೆಚ್ಚದ ಕಟ್ಟಡ ಕಟ್ಟಿದರೆ ಅದು ಅಭಿವೃದ್ಧಿ ಅಲ್ಲ. ಜನ ಸಾಮಾನ್ಯರ ಅಭಿವೃದ್ಧಿ ಮಾಡುವ ಮೂಲಕ ನಿಜವಾದ ಅಭಿವೃದ್ಧಿ ಏನೆಂಬುದನ್ನು ತೋರಿಸುತ್ತೇನೆ’ ಎಂದು ಶಾಸಕ ಪ್ರೀತಂ ಗೌಡ ಅವರು ಶಾಸಕ ರೇವಣ್ಣ ಅವರಿಗೆ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 14 ತಿಂಗಳಿಂದ ತಮ್ಮನ್ನು ನಡೆಸಿಕೊಂಡ ರೀತಿ, ಅಭಿವೃದ್ಧಿಯ ನಡೆಯ ಬಗ್ಗೆ ಟೀಕಾ ಪ್ರಹಾರ ನಡೆಸಿದರು.

‘ಈವರೆಗೂ ಜಿಲ್ಲೆಯಲ್ಲಿ ಆಧುನಿಕ‌ ಬ್ರಿಟಿಷರ ಆಡಳಿತ ಜಾರಿಯಲ್ಲಿತ್ತು. ನಾನು ಒಬ್ಬ ಶಾಸಕ ಎಂಬ ಕನಿಷ್ಠ ಸೌಜನ್ಯ ತೋರದೆ ಉಡಾಫೆ ಹಾಗೂ ನಿಕೃಷ್ಟವಾಗಿ ನಡೆಸಿಕೊಂಡರು. ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯಾರಿಗೂ ಅಧಿಕಾರ ಶಾಶ್ವತ ಅಲ್ಲ ಎಂದು ಮೊದಲೇ ಹೇಳಿದ್ದೆ. ಭಗವಂತ ಎಲ್ಲವನ್ನೂ ನೋಡಿದ್ದಾನೆ. ಅವರಿಗಿಂತ ಹೆಚ್ಚು ದೇವರನ್ನು ನಂಬುವವನು. ಭಗವಂತ ಈಗ ನನ್ನ ಪರವಾಗಿದ್ದಾನೆ. ಯಾರು ಒಳ್ಳೆ ಕೆಲಸ ಮಾಡುತ್ತಾರೋ ಅವರ ಪರವಾಗಿ ಇರುತ್ತಾನೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದು ರೇವಣ್ಣ ಅವರಿಗೆ ತಿರುಗೇಟು ನೀಡಿದರು.

ADVERTISEMENT

‘ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ನನ್ನ ಬಳಿ ಡೂಪ್ಲಿಕೇಟ್ ಕೀ‌ ಇರುತ್ತೆ’ ಎಂದಿದ್ದ ರೇವಣ್ಣ ಅವರನ್ನು ಕುಟುಕಿದ ಪ್ರೀತಂ, ‘ಹಿಂದೆ ಇದ್ದ ಬೀಗವನ್ನೇ ಈಗ ಬದಲಾಯಿಸಿದ್ದೇವೆ. ಡೂಪ್ಲಿಕೇಟ್ ಕೀ ಈ ಸರ್ಕಾರದಲ್ಲಿ ಕೆಲಸ ಮಾಡುವುದಿಲ್ಲ. ಜಿಲ್ಲೆಯಲ್ಲೀಗ ಪ್ರಜಾಪ್ರಭುತ್ವ ಸ್ಥಾಪನೆಯಾಗಿದೆ. ಜನರ ಆಸೆಯಂತೆ ಕೆಲಸ ನಡೆಯಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಸಮ್ಮಿಶ್ರ ಸರ್ಕಾರದ್ದು ಅರೇಂಜ್ ಮ್ಯಾರೇಜೂ ಅಲ್ಲ ಲವ್ ಮ್ಯಾರೇಜೂ ಅಲ್ಲ. ತಾಳಿ ಒಬ್ಬರ ಕೈಲಿತ್ತು, ಹೆಣ್ಣು ಇನ್ನೊಂದು ಕಡೆ ಇತ್ತು. ಹೇಗೋ ಮದುಗೆ ಆಗಿ ಹೋಗಿತ್ತು. ಅದು ಆತುರದ ಮದುವೆ ಯಾಗಿದ್ದರಿಂದ ಸರ್ಕಾರ ಪತನವಾಗಿದೆ. ಇದರ ಹಿಂದೆ ಆರ್.ಎಸ್.ಎಸ್ ಕೈವಾಡ’ ಎಂಬ ಸಿದ್ದರಾಮಯ್ಯಗೂ ಪ್ರೀತಂ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.