ರಾಣೆಬೆನ್ನೂರು: ಬಿಟಿ ಹತ್ತಿ ಪ್ಯಾಕೆಟ್‌ಗಳನ್ನು ರಸೀದಿ ಇಲ್ಲದೇ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಸೋಮವಾರ ದಾಳಿ ನಡೆಸಿ, ವ್ಯಾಪಾರ ಮಳಿಗೆಗೆ ಬೀಗಮುದ್ರೆ ಹಾಕಿದ್ದಾರೆ.
ನಗರದ ನಂದಿ ಹೈಬ್ರೀಡ್ ಸೀಡ್ಸ್ ಅಂಗಡಿಯಲ್ಲಿ ಬಿತ್ತನೆ ಬೀಜದ ತೆರೆದ ಮಾದರಿಗಳನ್ನು ಮುಕ್ತ ಮಾರಾಟಕ್ಕೆ ಇಡಲಾಗಿತ್ತು. ಅಲ್ಲದೆ ದಾಸ್ತಾನು ಮಾಡಿದ ಬೀಜಗಳನ್ನು ರಸೀದಿ ಇಲ್ಲದೆ ರೈತರಿಗೆ ಕೊಡಲಾಗುತ್ತಿತ್ತು. ಈ ಕುರಿತು ಕೃಷಿ ಅಧಿಕಾರಿಗಳಿಗೆ ರೈತರು ದೂರು ನೀಡಿದ್ದರು. ಬೀಜಗಳ (ನಿಯಂತ್ರಣ) ಕಾಯ್ದೆ ಉಲ್ಲಂಘನೆ ಆರೋಪದಡಿ ದಾಳಿ ನಡೆಸಿದ ಕೃಷಿ ಅಧಿಕಾರಿಗಳು, ಅಂಗಡಿಗೆ ಬೀಗ ಹಾಕಿ ದೂರ ದಾಖಲಿಸಿದ್ದಾರೆ.
ದಾಳಿ ನಂತರ ಸಹಾಯಕ ಕೃಷಿ ನಿರ್ದೇಶಕ ನಾಗನಗೌಡ ರಡ್ಡಿ ಮಾತನಾಡಿ, ನೋಂದಣಿ ದೃಢೀಕರಣ ಪತ್ರವಿಲ್ಲದೇ, ನವೀಕರಿಸಿದ ಬೀಜಗಳ್ನು ಮಾರಾಟ ಮಾಡುವ ರಫ್ತು ಅಥವಾ ಆಮದು ಮಾಡುವ ವ್ಯಾಪಾರವನ್ನು ಮಾಡಿದ್ದು, ವ್ಯಾಪಾರ ಮಳಿಗೆಯಲ್ಲಿ ಪ್ರತಿ ದಿನದ ಬೀಜ ದಾಸ್ತಾನುಗಳ ಆರಂಭ ಮತ್ತು ಮುಕ್ತಾಯದ ಶಿಲ್ಕು ಬೀಜಗಳ ದರ ಪಟ್ಟಿ ಹಾಗೂ ಸಂಸ್ಥೆಗಳಿಂದ ಪಡೆದ ದಾಸ್ತಾನು/ವಿತರಣೆ/ ಲಭ್ಯತೆ ಬಗ್ಗೆ ಮಾಹಿತಿ ಪ್ರಕಟಿಸುವ ಸೂಚನೆ ಇದೆ. ಮಾಹಿತಿಯನ್ನು ದಾಖಲಿಸದೇ ಬೀಜದ ಅಂಗಡಿಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಿದರು.
ಬೀಜದ ದಾಸ್ತಾನು ಖರೀದಿ ಮತ್ತು ಮಾರಾಟದ ಬಗ್ಗೆ ಮಾಹಿತಿ ನೀಡದೆ, ಹಿಂದಿನ ತಿಂಗಳು ನಮೂದಿಸಿದ ದಾಖಲೆಗಳನ್ನು ಅಂಗಡಿ ಮಾಲೀಕರು ಒದಗಿಸಿದರು. ಹಿಂದಿನ ತಿಂಗಳ ಮಾಹಿತಿಯನ್ನೂ ಇಲಾಖೆಗೆ ಸಲ್ಲಿಸಿಲ್ಲ. ಇದು ಕಾನೂನು ಬಾಹಿರ. ಅದಕ್ಕಾಗಿ ಅಂಗಡಿಗೆ ಬೀಗ ಹಾಕಿ, ಮಾಲೀಕರಿಗೆ ಷೋಕಾಸ್ ನೊಟೀಸ್ ನೀಡಲಾಗಿದೆ ಎಂದು ರಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.