ADVERTISEMENT

`ಅಭಿವೃದ್ಧಿಯಲ್ಲಿ ಜಾತಿ ಪರಿಗಣನೆ ಇಲ್ಲ'

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:27 IST
Last Updated 18 ಜೂನ್ 2013, 11:27 IST

ರಾಣೆಬೆನ್ನೂರು: `ಚುನಾವಣೆಯಲ್ಲಿ ಎಲ್ಲ ಜಾತಿ, ಧರ್ಮದ ಜನರೂ ಚುನಾವಣೆಯಲ್ಲಿ ಆಶೀರ್ವದಿಸಿದ್ದು, ಅಭಿವೃದ್ಧಿಯಲ್ಲಿ ಜಾತಿ, ಧರ್ಮ ನೋಡದೇ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ' ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.

ನಗರದ ಶಿಕ್ಷಕರ ಸಮುದಾಯ ಭವನದಲ್ಲಿ ಭಾವಸಾರ ಕ್ಷತ್ರಿಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಾವಸಾರ ಕ್ಷತ್ರೀಯ ಕ್ಷೇಮಾಭಿವೃದ್ಧಿ ಮಹಿಳಾ ಮಂಡಳಿ ಆಶ್ರಯದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

`ಯಾವುದೇ ಒಂದು ಸಮಾಜ ಮುಂದುವರಿಯಬೇಕಾದರೆ ಆ ಸಮಾಜದವರು ವಿದ್ಯಾವಂತರಾಗಿ ಸರ್ಕಾರದ ಯೋಜನೆಗಳನ್ನು ಸದೋಪಯೋಗಪಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು' ಎಂದರು.

`ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ನೀಡಿ ಎಂದು ಮನವಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ನಿವೇಶನ ನೀಡಲು ಪ್ರಾಮಾಣಿಕ ಪ್ರಯತ್ನಿಸಲಾಗುವುದು' ಎಂದು ಕೋಳಿವಾಡ ಭರವಸೆ ನೀಡಿದರು.

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಜಿ.ಕೆ.ಸತ್ಯ ಮಾತನಾಡಿ, `ಸಮಾಜದ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ, ಸಮಾಜದ ಜನರು ಸಂಘಟಿತರಾಗಿ ಹೋರಾಟ ನಡೆಸುವುದು ಅವಶ್ಯವಾಗಿದೆ. ಸಮಾಜ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆಯಲು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ' ಎಂದು ಹೇಳಿದರು.

ಸ್ಥಳೀಯ ಭಾವಸಾರ ಕ್ಷತ್ರಿಯ ಕ್ಷೇಮಾಭಿವದ್ಧಿ ಸಂಘದ ಅಧ್ಯಕ್ಷ ರಾಜು.ಡಿ.ಪಿಸೆ, ಜಿ.ಎಸ್.ರಾಮಚಂದ್ರ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ರಾಜ್ಯ ಅಂತರಾಷ್ಟ್ರೀಯ ಭಾವಸಾರ ಮಹಾಸಭೆ ಅಧ್ಯಕ್ಷ ಆರ್.ಡಿ.ಸೀತಾರಾಮರಾವ್, ಶ್ರೀನಿವಾಸ ಕುಂಟೆ, ನಾಗರಾಜ್‌ರಾವ್ ಬೇಂದ್ರೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.