ADVERTISEMENT

‘ಇತಿಹಾಸವನ್ನು ಮಹಿಳೆ ರಚಿಸಬೇಕಿತ್ತು’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 9:47 IST
Last Updated 14 ಜುಲೈ 2017, 9:47 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಮನೆಯಂಗಳದಲ್ಲಿ ಸಾಹಿತ್ಯ ಸೌರಭ ಕಾರ್ಯಕ್ರಮವನ್ನು ಪ್ರಾಚಾರ್ಯ ಎಚ್‌.ಬಿ.ಪಂಚಾಕ್ಷರಯ್ಯ ಉದ್ಘಾಟಿಸಿದರು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಮನೆಯಂಗಳದಲ್ಲಿ ಸಾಹಿತ್ಯ ಸೌರಭ ಕಾರ್ಯಕ್ರಮವನ್ನು ಪ್ರಾಚಾರ್ಯ ಎಚ್‌.ಬಿ.ಪಂಚಾಕ್ಷರಯ್ಯ ಉದ್ಘಾಟಿಸಿದರು   

ಶಿಗ್ಗಾವಿ: ‘ದೇಶದಲ್ಲಿ ಇತಿಹಾಸಕಾರರಿದ್ದಾರೆ. ಆದರೆ ಈವರೆಗೆ ಇತಿಹಾಸಗಾರ್ತಿಯರಿಲ್ಲ. ಹೀಗಾಗಿ ಸಾಕಷ್ಟು ಮಹಿಳೆಯರು ಇತಿಹಾಸದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರೂ ಪುರುಷ ಪ್ರಧಾನ ಸಮಾಜ ಅವರಿಗೆ ಉನ್ನತ ಸ್ಥಾನಮಾನ ನೀಡಲು ನಿರಾಕರಿಸಿದೆ’ ಎಂದು ಎಂದು ಬೆಂಗಳೂರಿನ ಬಸವನಗುಡಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ.ಎಚ್‌.ಎಸ್‌.ಸತ್ಯನಾರಾಯಣ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಕಸಾಪ ಸಹಯೋಗದಲ್ಲಿ ಗುರುವಾರ ನಡೆದ ಮನೆಯಂಗಳದಲ್ಲಿ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ‘ಇಂದಿನ  ದಿನಗಳಲ್ಲಿ ಮಹಿಳೆಯ ಸ್ಥಾನಮಾನ’ ಕುರಿತು ಉಪನ್ಯಾಸ ನೀಡಿದರು.

‘ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯಲ್ಲಿ ಸಾಧನೆ ಮಾಡುವ ಒಬ್ಬ ಮಹಿಳೆಯ ಹೆಸರನ್ನೂ ಬರೆದಿಲ್ಲ. ಹೀಗಾಗಿ ಇಂಥ ನಾಡಗೀತೆ ರಚಣೆಯಲ್ಲಿ ಮಹಿಳೆ ನಿರಾಕರಣೆ ಕಂಡು ಬರುತ್ತಿದೆ. ನಾವು ನಾಡಗೀತೆ ವಿರೋಧಿಸುತ್ತಿಲ್ಲ. ಆದರೆ, ಮಹಿಳೆಗೆ  ಉನ್ನತ ಸ್ಥಾನಮಾನ ನೀಡಬೇಕಾಗಿತ್ತು ಎಂಬ ವಾದ ನಮ್ಮದು’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಎಚ್‌.ಬಿ. ಪಂಚಾಕ್ಷರಯ್ಯ, ‘ಕನ್ನಡ ಭಾಷಾ ಅಧ್ಯಯನ ಮಾಡಿರುವ ಯುವಕರಿಗೆ ಉದ್ಯೋಗದಲ್ಲಿ ವಿಶೇಷ ಸ್ಥಾನ ನೀಡಬೇಕು. ಮಕ್ಕಳಿಗೆ ಇಂಗ್ಲಿಷ್ ವ್ಯಾಮೋಹ ಬಿಟ್ಟು ಪರಿಣಾಮಕಾರಿಯಾಗಿ ಕನ್ನಡ ಭಾಷೆ ಕುರಿತು ಓದು, ಬರಹ ಮತ್ತು ವಾತಾವರಣ ಮೂಡಿಸಬೇಕು. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಮಹಿಳೆಯರ ಕೈಯಲ್ಲಿ ಆಡಳಿತ ಸಿಗಬೇಕು’ ಎಂದು ಅಭಿಪ್ರಾಯಪಟ್ಟರು.

ಬಂಕಾಪುರ ಹೋಬಳಿ ಮಟ್ಟದ ಕಸಾಪ ಅಧ್ಯಕ್ಷ ಡಾ.ಆರ್‌.ಎಸ್‌. ಅರಳೆಲೆಮಠ ಮಾತನಾಡಿದರು. ‘ಭಾಷಾ ಬೆಳವಣಿಗೆಯಲ್ಲಿ ಸ್ವಯಂ ಪ್ರೇರಣೆ ಮುಖ್ಯ. ಈ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಸೇವೆ ಸಲ್ಲಿಸಲು ಮುಂದಾಗಬೇಕು’ ಎಂದರು.

ಪುರಸಭೆ ಮಾಜಿ ಸದಸ್ಯ ವಿ.ಸಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗೌರಿ ಮಹಿಳಾ ಮಂಡಳ ಅಧ್ಯಕ್ಷೆ ಪದ್ಮಾವತಿ ಜೋಶಿ, ಕಸಾಪ  ಕೋಶಾಧ್ಯಕ್ಷ ಎ.ಕೆ.ಅದವಾನಿಮಠ, ಕಾರ್ಯದರ್ಶಿ ಮಂಜುನಾಥ ಕೂಲಿ, ರಾಮಕೃಷ್ಣ ಆಲದಕಟ್ಟಿ, ಕೃಷ್ಣಾ ಕುಲಕರ್ಣಿ, ಪ್ರಕಾಶ ಪೂಜಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.