ADVERTISEMENT

ಇಮ್ಮಡಿಸಿದ ಕಾಂಗ್ರೆಸ್ ಶಕ್ತಿ: ಮನೋಹರ

ಕಾಂಗ್ರೆಸ್‌ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 10:48 IST
Last Updated 28 ಏಪ್ರಿಲ್ 2018, 10:48 IST

ಹಾನಗಲ್: ‘ತಾಲ್ಲೂಕಿನಲ್ಲಿ ಕಳೆದ 5 ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಮತ್ತು ಪ್ರಸ್ತುತ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಪ್ರತಿಯೊಬ್ಬ ಮತದಾರರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದರು.

ಗುರುವಾರ ಸಂಜೆ ಇಲ್ಲಿನ ತಹಶೀಲ್ದಾರ್‌ ಕಚೇರಿ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾದ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ಬಲಿಷ್ಠವಾಗಿದೆ. ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ. ರಾಜ್ಯದ ಚುಕ್ಕಾಣಿಯನ್ನು ಕಾಂಗ್ರೆಸ್ ಮರಳಿ ಪಡೆದುಕೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿ, ‘ಶಾಸಕ ಮನೋಹರ ತಹಸೀಲ್ದಾರ್‌ ನೇತೃತ್ವದಲ್ಲಿ ಚುನಾವಣೆ ಪ್ರಚಾರ ಕಾರ್ಯ ನಡೆಯುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ, ನೂರಾರು ಬಿಜೆಪಿ ಕಾರ್ಯಕರ್ತರು, ವಿವಿಧ ಭಾಗದ ಬಿಜೆಪಿ ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿರುವುದು ಪಕ್ಷ ಶಕ್ತಿಯನ್ನು ಇಮ್ಮಡಿಸಿದೆ’ ಎಂದರು.

ADVERTISEMENT

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ಹಾನಗಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಎಸ್‌.ಪಾಟೀಲ, ನಗರ ಘಟಕದ ಅಧ್ಯಕ್ಷ ಎಂ.ಕೆ.ಹುಬ್ಬಳ್ಳಿ, ಮುಖಂಡರಾದ ಬಿ.ಶಿವಪ್ಪ, ಸತೀಶ ದೇಶಪಾಂಡೆ, ಶಿವಬಸಪ್ಪ ಪೂಜಾರ ಇದ್ದರು.

ಅಪ್ಪಟ ಕಾಂಗ್ರೆಸ್ಸಿಗ

‘ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ಗುರುವಾರ ಹಿಂದಕ್ಕೆ ಪಡೆದಿದ್ದೇನೆ. ನಾನು ಅಪ್ಪಟ ಕಾಂಗ್ರೆಸ್ಸಿಗ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸುವುದು ಮತ್ತು ಬಿಜೆಪಿ ಸೋಲಿಸುವುದು ನನ್ನ ಗುರಿ’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.