ADVERTISEMENT

ಇಲ್ಲಿ ಸಂಚಾರವೇ ಸಾಹಸ: ನಿಲುಗಡೆಗೂ ಸ್ಥಳವಿಲ್ಲ

ಹರ್ಷವರ್ಧನ ಪಿ.ಆರ್.
Published 19 ಜೂನ್ 2017, 5:15 IST
Last Updated 19 ಜೂನ್ 2017, 5:15 IST
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ಬಳಿಯಲ್ಲೇ ವಾಹನ ಪಾರ್ಕಿಂಗ್
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ಬಳಿಯಲ್ಲೇ ವಾಹನ ಪಾರ್ಕಿಂಗ್   

ಹಾವೇರಿ: ‘ಹಾವೇರಿಯಲ್ಲಿ ಹಾಯ್‌ಬಾರ್‍ದು..’ ಎಂಬುದು ಇಲ್ಲಿ ಮತ್ತೆ ಮತ್ತೆ ಅನುರಣಿಸುವ ಮಾತು. ‘ಹಾವೇರಿ’ಯು ಜಿಲ್ಲಾ ಕೇಂದ್ರವಾಗಿ 20ನೇ ವರ್ಷಕ್ಕೆ ಕಾಲಿಡುತ್ತಿದ್ದರೂ, ಪರಿಸ್ಥಿತಿ ಬದಲಾಗಲಿಲ್ಲ. ‘ಸಂಚಾರ ಪೊಲೀಸ್‌‘ ಠಾಣೆ ಆರಂಭಗೊಂಡರೂ, ಸಂಚಾರ ನಿಯಮಾವಳಿ ಪಾಲನೆಗೆ ಬೇಕಾದ ಮೂಲ ಸೌಲಭ್ಯಗಳಿಲ್ಲ. 

ಸದ್ಯ ವಾಹನ ನಿಂತಲ್ಲೇ ಪಾರ್ಕಿಂಗ್, ಜನ ಹತ್ತಿದಲ್ಲೇ ನಿಲ್ದಾಣ, ಬಂಡಿ ಇಟ್ಟಲ್ಲೇ ವ್ಯಾಪಾರ, ಸಾಗಿದ ರಸ್ತೆಯೇ ಒನ್‌ ವೇ,  ರಸ್ತೆ ಬದಿಯೇ ತಂಗುದಾಣ, ಪಾದಚಾರಿಗಳಿಗೆ ರಸ್ತೆಯೇ ಗತಿ ಎನ್ನುವ ಸ್ಥಿತಿ ಇದೆ. ಇದನ್ನು ಕಂಡೂ ಕಾಣದಂತಿರುವ ನಗರಸಭೆ ಹಾಗೂ ಜನಪ್ರತಿನಿಧಿಗಳು. ನಂಬರ್ ಪ್ಲೇಟ್, ಅಧಿಕ ಡೆಸಿಬೆಲ್‌ಹಾರ್ನ್‌, ಖಾಸಗಿ ವಾಹನಗಳ ದರ್ಬಾರ್ ಇದ್ದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೌನ! ಹೀಗೆ ಮೂಲಸೌಲಭ್ಯ ಹಾಗೂ ಕಠಿಣ ಕ್ರಮಗಳ ಕೊರತೆ ನಡುವೆಯೇ ಸಂಚಾರ ಪೊಲೀಸರೂ ಮೂಕ ಪ್ರೇಕ್ಷಕರು. 

ಪ್ರಮುಖ ಸ್ಥಳದಲ್ಲೇ ದುಃಸ್ಥಿತಿ:  ಜಿಲ್ಲೆಯ ಸಂಪರ್ಕದ ಪ್ರಮುಖ ಕೇಂದ್ರವಾದ ರೈಲು ಹಾಗೂ ಬಸ್‌ ನಿಲ್ದಾಣದ ಮುಂಭಾಗದಲ್ಲಿಯೇ ಖಾಸಗಿ ವಾಹನಗಳ ನಿಲುಗಡೆ ಹಾಗೂ ಆಟೊಗಳಿಗ ಪ್ರತ್ಯೇಕ ನಿಲುಗಡೆ ಇಲ್ಲ. ಪ್ರಯಾಣಿಕರು ಹಾಗೂ ಇತರ ವಾಹನ ಸವಾರರು ಜೀವ ಹಿಡಿದುಕೊಂಡು ಸಂಚರಿಸಬೇಕು.

ADVERTISEMENT

ರೈಲು ಮತ್ತು ಬಸ್ ನಿಲ್ದಾಣದ ಮುಂಭಾಗದ ರಸ್ತೆ  ಅಗಲೀಕರಣಗೊಳ್ಳದಿರುವುದು ಇದಕ್ಕೆ ಕಾರಣ. ಹಾನಗಲ್– ಹಾವೇರಿ ರಸ್ತೆ ಕಾಮಗಾರಿ ನಡೆದರೂ, ಬಸ್ ನಿಲ್ದಾಣದ ಮುಂದೆ ಇಕ್ಕಟ್ಟಾಗಿಯೇ ಇದೆ. ಹೀಗಾಗಿ ಸುಸಜ್ಜಿತ ಬಸ್ ನಿಲ್ದಾಣವಾದರೂ, ಜನರ ಪರದಾಟ  ತಪ್ಪಿಲ್ಲ. ಇಲ್ಲಿನ ರಸ್ತೆ ವಿಸ್ತರಣೆಗೆ ಆಡಳಿತ ಮುಂದಾಗದಿರುವುದು ವಿಪರ್ಯಾಸ.

ಇನ್ನು, ರೈಲು ನಿಲ್ದಾಣದ ಮುಂಭಾಗದಲ್ಲೇ ಮಿನಿ ವಿಧಾನ ಸೌಧವಿದೆ. ಇವೆರಡರ ಮಧ್ಯದ ರಸ್ತೆ ಅಗಲ ಕಿರಿದಾಗಿದೆ. ಇಲ್ಲಿಯೇ ಆಟೊಗಳು ಸಾಲುಗಟ್ಟಿ ನಿಲ್ಲುತ್ತವೆ.  ಮಿನಿ ವಿಧಾನಸೌಧಕ್ಕೆ ಬರುವವರೂ ವಾಹನ ನಿಲ್ಲಿಸುತ್ತಾರೆ. ಹೀಗಾಗಿ ಸಂಚಾರ ದುಸ್ತರವಾಗಿದೆ.

‘ಬಸ್ ನಿಲ್ದಾಣದ ಬಳಿ ಖಾಸಗಿ ವಾಹನಗಳಿಗೆ ಪ್ರತ್ಯೇಕ ನಿಲುಗಡೆಯೇ ಇಲ್ಲ. ಹಗಲು ಟ್ರ್ಯಾಕ್ಸ್, ಕ್ರೂಯಿಸರ್, ಟೆಂಪೊ, ಆ್ಯಪೆ, ಟಂಟಂ ಮತ್ತಿತರ ವಾಹನಗಳು ರಸ್ತೆಯಲ್ಲಿದ್ದರೆ, ಸಂಜೆಯಾಗುತ್ತಿದ್ದಂತೆಯೇ ಖಾಸಗಿ ಬಸ್‌ಗಳು ರಸ್ತೆ ಆವರಿಸಿಕೊಂಡು ಬಿಡುತ್ತವೆ. ನಗರದ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಸೇರುವ ಮೂರು ಪ್ರಮುಖ ರಸ್ತೆಗಳಲ್ಲೂ ‘ಸುಗಮ ಸಂಚಾರ’ ಎಂಬುದು ಗಗನಕುಸುಮ. ಇನ್ನು ಬಿಡಾಡಿ ದನಗಳು, ಹಂದಿಗಳು, ಬೀದಿ ನಾಯಿಗಳ ಕಾಟವೂ ಇವೆ’ ಎನ್ನುತ್ತಾರೆ ಮಲ್ಲಿಕಾರ್ಜುನ.

ಕಟ್ಟಡಗಳು: ರಾಷ್ಟ್ರೀಯ ಕಟ್ಟಡ ನಿಯಮಾವಳಿ (National building code) ಪ್ರಕಾರ 15 ಮೀಟರ್ (50ಅಡಿ)ಗಿಂತ ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ದಳದ ಪರವಾನಗಿ ಕಡ್ಡಾ ಯ. ಹೀಗಾಗಿ ಕಟ್ಟಡದ ಮುಂದೆ ಹಾಗೂ ಸುತ್ತ ನಿರ್ದಿಷ್ಟ ಪ್ರಮಾಣದ ಜಾಗ ಬಿಟ್ಟಿರಬೇಕು. ಅಲ್ಲದೇ, ವಾಹನ್ ಪಾರ್ಕಿಂಗ್ ಜಾಗವೂ ಕಡ್ಡಾಯ. ಆದರೆ, ಹಾವೇರಿಯ ಬಹುತೇಕ ಕಟ್ಟಡ ಗಳಲ್ಲೂ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.

ನಗರದ ಇತರ ವೃತ್ತ ಹಾಗೂ ರಸ್ತೆಗಳ ಪಾಡೂ ಇದಕ್ಕಿಂತ ಭಿನ್ನ ವಾಗಿಲ್ಲ. ನಗರಸಭೆ ಕ್ರಮಕ್ಕೆ ಮುಂದಾಗಿಲ್ಲ. ಆದರೆ, ಈಚೆಗೆ ನಡೆದ ‘ಸಾರಿಗೆ’ ಸಭೆಯಲ್ಲಿ ಜಿಲ್ಲಾಧಿಕಾರಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದು, ಇದನ್ನು ಅನುಷ್ಠಾನಕ್ಕೆ ತರಲೇ ಬೇಕು ಎಂದು ಜನತೆ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.