ADVERTISEMENT

ಎತ್ತುಗಳ ಖರೀದಿ ಬಲು ಜೋರು

ರಾಣೆಬೆನ್ನೂರು ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ; ಬಿತ್ತನೆಗೆ ದಿನಗಣನೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 13:12 IST
Last Updated 29 ಮೇ 2018, 13:12 IST
ರಾಣೆಬೆನ್ನೂರಿನ ಎಪಿಎಂಸಿಯಲ್ಲಿ ಮಾರಾಟಕ್ಕೆ ಬಂದಿದ್ದ ರಾಸುಗಳ ನೋಟ
ರಾಣೆಬೆನ್ನೂರಿನ ಎಪಿಎಂಸಿಯಲ್ಲಿ ಮಾರಾಟಕ್ಕೆ ಬಂದಿದ್ದ ರಾಸುಗಳ ನೋಟ   

ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ ಸುರಿದ ಪರಿಣಾಮ, ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ಗರಿಗೆದರಿವೆ. ಈ ಬೆನ್ನಲ್ಲೆ ತಾಲ್ಲೂಕಿನಲ್ಲಿ ಎತ್ತುಗಳು ಖರೀದಿಯೂ ಚುರುಕು ಪಡೆದಿದೆ.

ನಗರದ ಎ.ಪಿ.ಎಂ.ಸಿ ಉಪ ಪ್ರಾಂಗಣದಲ್ಲಿ ಭಾನುವಾರ ನಡೆದ ಸಂತೆಯಲ್ಲಿ ಬಿರುಸಿನ ವಹಿವಾಟು ಕಂಡು ಬಂತು. ‘ಟ್ರ್ಯಾಕ್ಟರ್‌ನಿಂದ ಹೊಲ ಊಳಿಸಿದರೂ ಬಿತ್ತನೆಗೆ, ಎಡೆ–ಕುಂಟೆ ಹೊಡೆಯಲು ಎತ್ತುಗಳು ಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಎತ್ತುಗಳು ಕೃಷಿಗೆ ಆಧಾರ’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸಣ್ಣ ಕಡೂರ.

‘ಮುಂಗಾರು ಪೂರ್ವ ಉತ್ತಮ ಮಳೆ ಸುರಿದಿದೆ. ‌ಬಿತ್ತನೆಗಾಗಿ ಎತ್ತು ಖರೀದಿಗೆ ಬಂದಿದ್ದೇವೆ. ರಾಸುಗಳ ದರದಲ್ಲಿ ಕಳೆದ ವಾರಕ್ಕಿಂತ ಈ ವಾರ ₹10 ಸಾವಿರ ಹೆಚ್ಚಾಗಿದೆ’ ಎಂದು ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಭರಮರಡ್ಡಿ ದೇವರಡ್ಡಿ ತಿಳಿಸಿದರು.

ADVERTISEMENT

‘ಕಳೆದ ವಾರ ₹50 ರಿಂದ ₹85 ಸಾವಿರ ತನಕ ಎತ್ತುಗಳು ಮಾರಾಟವಾಗಿದ್ದವು. ಇದೀಗ ನಾಲ್ಕು ಹಲ್ಲು, ಆರು ಹಲ್ಲುಗಳ
ಜೋಡಿ ಎತ್ತುಗಳಿಗೆ ₹1.25 ಲಕ್ಷದ ತನಕ ಮಾರಾಟವಾಗುತ್ತಿವೆ. ಕಡೆ ಹಲ್ಲಿನ ಎತ್ತುಗಳು ₹50 ಸಾವಿರದಿಂದ ₹95 ಸಾವಿರ ವರೆಗೆ ವ್ಯಾಪಾರ ಆಗಿವೆ. ಸುತ್ತಲಿನ ಹಳ್ಳಿಗಳಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ವಾರದಿಂದ ವಾರಕ್ಕೆ ಎತ್ತುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ’ ಎಂದು ವ್ಯಾಪಾರಸ್ಥ ಹೊನ್ನಾಳಿಯ ಹನುಮಂತಪ್ಪ ಸಿದ್ಲಿಪುರ ಹಾಗೂ ಹಲಗೇರಿಯ ಚಂದ್ರಪ್ಪ ಹರಿಯಾಳದವರ ವಿಶ್ಲೇಷಿಸಿದರು.

ಬೆಲೆಯಲ್ಲಿ ಹೆಚ್ಚಳವಾದ ಕಾರಣ, ಸಣ್ಣ ಹಿಡುವಳಿದಾರರು ಒಂದೊಂದು ಎತ್ತನ್ನು ಖರೀದಿಸಿ ಜೋಡಿ ಕೊಳ್ಳುತ್ತಿದ್ದ ದೃಶ್ಯವೂ ಕಂಡು ಬಂತು.

ಹಾಸನ, ಬೆಳಗಾವಿ, ಸಂಕೇಶ್ವರ, ದಾವಣಗೆರೆ, ಹೊನ್ನಾಳಿ, ಹಂಸಭಾವಿ, ರಾಮನಗರ, ಶಿವಮೊಗ್ಗ, ಬಳ್ಳಾರಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ತುಮ್ಮಿನಕಟ್ಟಿ, ಹಾವೇರಿ, ಹುಬ್ಬಳ್ಳಿ, ನೂಲ್ವಿ, ಹುಲಗೂರ ಕಡೆಗಳಿಂದ ವ್ಯಾಪಾರಸ್ಥರು ಎತ್ತುಗಳನ್ನು ಲಾರಿ, ಟಾಟಾ ಏಸ್‌ ವಾಹನಗಳಲ್ಲಿ ಸಂತೆಗೂ ಒಂದು ದಿನ ಮೊದಲೇ ಮಾರುಕಟ್ಟೆಗೆ ತಂದಿದ್ದರು.

‘ದೊಡ್ಡ ರಕಮು ಕೊಟ್ಟು ಎತ್ತುಗಳನ್ನು ಒಯ್ದರೇ ನಾವೇ ಸಾಕಬೇಕು. ನಮಗೂ ನಾಲ್ಕು ಎತ್ತು ಕಟ್ಟಬೇಕು ಎಂಬ ಹುರುಪು ಬಹಳ ಇದೆ. ಆದರೆ ಈಗಿನವರು ಕೃಷಿಗೆ ಮುಂದೆ ಬರಲ್ಲ. ಕೆಲಸ ಅರಸಿ ಪಟ್ಟಣಕ್ಕೆ ಸೇರಿಕೊಳ್ಳುತ್ತಾರೆ. ದನದ ಚಾಕರಿ ಮಾಡುವವರು ಕಡಿಮೆ. ಹೀಗಾಗಿ ಅಗತ್ಯಕ್ಕೆ ತಕ್ಕಂಥ ಎತ್ತುಕೊಂಡು ಹೋಗುತ್ತಿದ್ದೇನೆ’ ಎಂದು ಕಡೆ ಹಲ್ಲಿನ ಎತ್ತುಗಳನ್ನು ₹55 ಸಾವಿರಕ್ಕೆ ಖರೀಸಿದ್ದ ತಾಲ್ಲೂಕಿನ ಕೋಟಿಹಾಳದ ರೇವಣೆಪ್ಪ ನಿಟ್ಟೂರು ತಿಳಿಸಿದರು.

**
ಮುಂಗಾರು ಬಿತ್ತನೆಗೆ ರಾಸುಗಳು ಅಗತ್ಯ ಇದ್ದರಿಂದ ಆರು ಹಲ್ಲು ಮತ್ತು ನಾಲ್ಕು ಹಲ್ಲಿನ ಎತ್ತುಗಳನ್ನು ₹1.20 ಲಕ್ಷ ನೀಡಿ ಖರೀದಿಸಿದೆ
ಮಲ್ಲಪ್ಪ ಮುರಗಣ್ಣನವರ, ಕುಂದಗೋಳ ರೈತ 

**
ಭಾನುವಾರದ ಸಂತೆಯಲ್ಲಿ 104 ಎತ್ತು ಹಾಗೂ ಮೂರು ಹೋರಿಗಳು ಮಾರಾಟವಾಗಿವೆ. ಕಳೆದ ವಾರಕ್ಕೆ ಹೋಲಿಸಿದರೆ, ವ್ಯಾಪಾರದಲ್ಲಿ ಗಣನೀಯ ಹೆಚ್ಚಳವಾಗಿದೆ
– ಕೆ.ಕೆ.ವಿ ಪ್ರಸಾದ್, ಕಾರ್ಯದರ್ಶಿ ರಾಣೆಬೆನ್ನೂರು, ಎ.ಪಿ.ಎಂ.ಸಿ

ಮುಕ್ತೇಶ್ವರ ಪಿ. ಕೂರಗುಂದಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.