ADVERTISEMENT

ಎರಡು ಬೆಟ್ಟಗಳ ನಡುವೆ ಕಣವಿ ಸಿದ್ಧೇಶ್ವರ...

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 8:30 IST
Last Updated 26 ಫೆಬ್ರುವರಿ 2012, 8:30 IST

ರಟ್ಟೀಹಳ್ಳಿ: ಇಲ್ಲಿಗೆ ಸಮೀಪದ ಕಣವಿಸಿದ್ಗೇರಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನ ದಕ್ಷಿಣದ ಎರಡನೇ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ.  ಎರಡು ಬೆಟ್ಟಗಳ ಮಧ್ಯೆ ದೇವಸ್ಥಾನ ಇರುವುದರಿಂದ ಅನ್ವರ್ಥಕವಾಗಿ ಕಣವಿಸಿದ್ಧೇಶ್ವರ ಎಂದು ಕರೆಯಲಾಗುತ್ತದೆ.

11-12ನೇ ಶತಮಾನದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಶಿಲಾ ಶಾಸನಗಳಿಂದ ತಿಳಿದು ಬರುತ್ತದೆ. ಮೂಲ ಸಿದ್ದೇಶ್ವರ ದೇವರನ್ನು ಗುಹೆಯ ದೇವಸ್ಥಾನ ನಿರ್ಮಿಸಲಾಗಿದೆ. ಲಿಂಗದ ಎದುರಿಗೆ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯನ್ನು ಪ್ರದಕ್ಷಿಣೆ ಮಾಡಲು ಹೋದರೆ ಸವಿರಾರು ಬಾವಲಿಗಳ ಹಿಂಡು ಭಕ್ತರನ್ನು ಸ್ವಾಗತಿಸುತ್ತವೆ.  ಗುಹೆಯೊಳಗೆ ಮತ್ತೊಂದು ಲಿಂಗವನ್ನು ಸ್ಥಾಪಿಸಲಾಗಿದೆ.

ಇಲ್ಲಿ ದಾರಿ ಕಿರಿದಾಗಿದ್ದು   ಬಗ್ಗಿ ಪ್ರದಕ್ಷಿಣೆ ಮಾಡಬೇಕು.  ಭಗವತಿ ಕೆರೆ ದೇವಸ್ಥಾನದಿಂದ 3 ಕಿ.ಮೀ. ದೂರವಿದೆ. ಭಗವತಿ ಘಟ್ಟದ ಜಮದಗ್ನಿ ರಾಮೇಶ್ವರ ದೇವನಿಗೆ ಪಾಂಡುಕುಮಾರ  ಚೌಂಡರಸನು ನೀಡಿದ ದಾನಗಳ ಬಗ್ಗೆ ಉಲ್ಲೇಖವಿದೆ, ಈ ಶಿಲಾ ಶಾಸನದಲ್ಲಿ `ಭಗವತಿ ಕೆರೆ~ ಎಂದು ಉಲ್ಲೇಖಿಸಲಾದರೂ ಇದೊಂದು ಕೆರೆಯಲ್ಲ. ಕೇವಲ ನೀರಿನ ಝರಿ ಮಾತ್ರ. ಯಾವ ಕಲಕ್ಕೂ ನೀರಿನ ಹರಿವು ಬತ್ತುವುದಿಲ್ಲ. 

ಇಲ್ಲಿನ ಸುಂದರ ಪ್ರಕೃತಿ ಎಲ್ಲರನ್ನು ಮಂತ್ರ ಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದಾ ಮೌನ, ಶಾಂತಿ ನೆಲೆಸಿದೆ. ಹೊರ ಜಗತ್ತಿಗೆ ಅಪರಿಚಿತ ತಾಣವಾಗಿ ಉಳಿದಿದ್ದರಿಂದ ಇಲ್ಲಿ ಸ್ವಚ್ಛವಾದ ವಾತಾವರಣದೆ. ಆದರೆ ಬ್ರಿಟೀಶರ ಕಾಲದಲ್ಲಿ ಇಲ್ಲಿಗೆ ಚೀನಿ ಯಾತ್ರಿಕರು ಬರುತ್ತಿದ್ದರೆಂದು ತಿಳಿದು ಬಂದಿದೆ.

ಕಣವಿಸಿದ್ದೇಶ್ವರ ದೇವಸ್ಥಾನದ ಎದುರಿಗೆ ಇರುವ ಬೆಟ್ಟವೇ ಓಂ ಬೆಟ್ಟ. ಪ್ರಕೃತಿ ಪ್ರಿಯರನ್ನು ಸದಾಕಾಲ ಕೈ ಬೀಸಿ ಕರೆಯುತ್ತಿರುತ್ತದೆ. ಬೆಟ್ಟದ ಮೇಲೆ ದೀಪಮಾಲೆ ಕಂಬವಿದೆ. ಇದನ್ನು ಹತ್ತುವುದೇ ಒಂದು ರೋಮಾಂಚನಕಾರಿ ಅನುಭವ. ದೇವಸ್ಥಾನದ ಕೆಳಗೆ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿಂದ ಕೂಗಳತೆ ದೂರದಲ್ಲಿ ಅಂತರಗಂಗೆಯಿದೆ.

ಮಾರ್ಚ್ 1 ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.  ಹೂವಿನ ತೇರು, ರಂದು ಎಡೆ ಕೊಡುವುದು,  ಗುಗ್ಗಳ ಮತ್ತು ರಥೋತ್ಸವ ಕಾರ್ಯ ಕ್ರಮಗಳು  ವೈಭವ ದಿಂದ ನಡೆಯುತ್ತವೆ. ಓಕಳಿ ಮತ್ತು ಬುಕ್ಕಿಟ್ಟಿನ ಸೇವೆ, ಕಣವಿ ದುರ್ಗಾದೇವಿಗೆ ಉಡಿ ತುಂಬುವುದು ಕಾರ್ಯಕ್ರಮ ನಡೆಯಲಿವೆ.
 ಜತೆಗೆ ಸಿದ್ಧಾರೂಢ ಯುವಕ ಮಂಡಳಿ ವತಿಯಿಂದ `ಅನ್ನ ಹಾಕುವ ಕೈಗೆ ಕನ್ನ ಹಾಕುವ ಸರ್ಕಾರ~  ನಾಟಕ ಪ್ರದರ್ಶನ ನಡೆಯಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.