ADVERTISEMENT

ಎರಡು ವರ್ಷಗಳಲ್ಲಿ ಅಭಿವೃದ್ಧಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 6:40 IST
Last Updated 1 ಜೂನ್ 2011, 6:40 IST

ಹಾವೇರಿ: ಬಿಜೆಪಿ ಸರ್ಕಾರದ ಉಳಿದ ಎರಡು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸ ಲಾಗುತ್ತಿದ್ದು, ಇದರಿಂದಾಗಿ ಮಾದಾಪುರದಂತಹ ಚಿಕ್ಕ ಗ್ರಾಮ ಗಳಲ್ಲಿಯೂ ಸಹ ದೊಡ್ಡ ಮೊತ್ತದ ಕಾಮಗಾರಿಗಳಿಗೆ ಮುಂದಾಗುತ್ತಿರು ವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಸವಣೂರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಮಾದರಿ ವಸತಿ ಶಾಲೆಯ ಶಂಕುಸ್ಥಾಪನೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಅಪಾರ ಹಣ ವ್ಯಯ ಮಾಡಲಾಗಿದೆ. ಇನ್ನುಳಿದ ಎರಡು ವರ್ಷಗಳಲ್ಲಿ ಈಗಿನ  ಎರಡು ಪಟ್ಟು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕರ್ನಾಟಕವನ್ನು ಮಾದರಿಯನ್ನಾಗಿ ಮಾಡುತ್ತೇವೆ ಎಂದರಲ್ಲದೆ ಇದು ರಾಜ್ಯ ಸರ್ಕಾರ ಸಂಕಲ್ಪವೂ ಸಹ ಎಂದರು.

ಸವಣೂರು ತಾಲ್ಲೂಕಿನ ಮಾದಾಪುರ ಗ್ರಾಮವನ್ನು ಶೈಕ್ಷಣಿಕ ತಾಣವನ್ನಾಗಿ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ 4.36 ಕೋಟಿ ರೂಪಾಯಿಗಳ ಅನುದಾನದಲ್ಲಿ ಗ್ರಾಮಕ್ಕೆ ರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡ ನಿರ್ಮಿಸಲು ಮುಂದಾಗಿದೆ. ಇದೇ ಗ್ರಾಮದಲ್ಲಿಯೇ ಕಸ್ತೂರ ಬಾ ವಸತಿ ಶಾಲೆ ಸೇರಿದಂತೆ ಇನ್ನೆರಡು ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ರೈತರು ಕೃಷಿ ಚಟುವಟಿಕೆಗಳಲ್ಲಿ ಸುಸೂತ್ರವಾಗಿ ಕೈಗೊಳ್ಳಲು ರಾಜ್ಯ ಸರ್ಕಾರ ಸುವರ್ಣ ಭೂಮಿ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 10 ಸಾವಿರ ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಶಿಗ್ಗಾಂವ-ಸವಣೂರು ಕ್ಷೇತ್ರದಲ್ಲಿ 500 ಕೆರೆಗಳನ್ನು ಗುರುತಿಸಲಾಗಿದ್ದು, ಪ್ರತಿವರ್ಷ 100 ಕೆರೆಗಳಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಳೆದ ವರ್ಷ ಕೇವಲ 75 ಕೆರೆಗಳ ಅಭಿವೃದ್ಧಿ ಪಡಿಸಲಾಗಿದೆ. ಈ ವರ್ಷ ಬಾಕಿ ಉಳಿದಿರುವ 25 ಕೆರೆಗಳನ್ನು ಸೇರಿದಂತೆ ಒಟ್ಟು 125 ಕೆರೆಗಳನ್ನು ಅಭಿವೃದ್ಧಿ ಪಡಿಸ ಲಾಗುವುದು ಎಂದರು.

ಇದೇ ವೇಳೆ ಸಚಿವರು ಗ್ರಾಮಕ್ಕೆ 5.5 ಕೋಟಿ ರೂ.ಗಳ ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿ.ಪಂ. ಸದಸ್ಯೆ ಶೋಭಾ ನಿಸ್ಸೀಮಗೌಡರ, ತಾಪಂ ಅಧ್ಯಕ್ಷ ಎಂ.ಕೆ.ಬಿಜ್ಜೂರು, ಗ್ರಾ.ಪಂ. ಅಧ್ಯಕ್ಷೆ ಮೋದಿನಬಿ ಶಮನಾನವರ, ಉಪಾಧ್ಯಕ್ಷ ನಿಜಾಮುದ್ದೀನ್ ಕಿಲ್ಲೇದಾರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ರಂಗಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಸಿ.ತಿರ್ಲಾಪುರ, ತಾಲ್ಲೂಕು ಅಧಿಕಾರಿ ಕೆ.ಟಿ.ಬಸವರಾಜ  ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.