ಹಾವೇರಿ: ಮಣಿಪಾಲ ವಿಶ್ವವಿದ್ಯಾಲಯದ ವೈದ್ಯಕೀಯ ವಿರ್ದ್ಯಾಥಿನಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಎಸ್‌ಎಫ್‌ಐ ಜಿಲ್ಲಾ ವಿದ್ಯಾರ್ಥಿನಿಯರ ಘಟಕದ ಕಾರ್ಯಕರ್ತೆಯರು ಶನಿವಾರ ನಗರದ ಇಜಾರಿ ಲಕಮಾಪುರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಸ್‌ಎಫ್‌ಐ ರಾಜ್ಯ ಸಂಚಾಲಕಿ ರೇಣುಕಾ ಕಹಾರ ಮಾತನಾಡಿ, ದೇಶದಲ್ಲಿ ನಿತ್ಯ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ನಡೆಯತ್ತಿದ್ದು, ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿಗೆ ನಿಮಾರ್ಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಪಡೆಯುತ್ತಿರುವ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಈ ಕೃತ್ಯ ಖಂಡನಾರ್ಹವಾಗಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ಮಹಿಳೆಯರು ಉನ್ನತ ಶಿಕ್ಷಣದಿಂದಲೇ ದೂರ ಸರಿಯುತ್ತಿದ್ದಾರೆ ಎಂದು ವಿಷಾದಿಸಿದರು.
ಅತ್ಯಾಚಾರದಂತಹ ಹೀನ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣ ಬಂದಿಸಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ಕೊಡುವುದರ ಜೊತೆಗೆ ವಿದ್ಯಾಭ್ಯಾಸಕ್ಕೆ ಸಹಾಯ ನಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶಾಲಾ, ಕಾಲೇಜುಗಳು ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆಗೆ ಹಿದೇಟು ಹಾಕುತ್ತಿವೆ. ಆದ್ದರಿಂದ ತಕ್ಷಣ ಈ ಸಮಿತಿಯು ದೇಶದ ಎಲ್ಲ ಶಾಲಾ, ಕಾಲೇಜುಗಳಲ್ಲಿ ಮತ್ತು ಮಹಿಳೆಯರು ದುಡಿಯುವ ಕ್ಷೇತ್ರದಲ್ಲಿ ಜಾರಿಯಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆನೆಯಲ್ಲಿ ಎಸ್‌ಎಫ್‌ಐ ವಿದ್ಯಾರ್ಥಿನಿಯರ ಉಪಸಮಿತಿ ತಾಲ್ಲೂಕು ಸಂಚಾಲಕಿ ನಿಲಮ್ಮ ಶಂಕ್ರಪ್ಪನವರ, ಮುಖಂಡರಾದ ವಿನಾಯಕ.ವೈ., ಕಾಲೇಜು ಘಟಕದ ವಿದ್ಯಾರ್ಥಿನಿಯರಾದ ಪ್ರಿಯಂಕಾ, ಅಶ್ವಿನಿ, ಪವಿತ್ರಾ, ಐಶ್ವರ್ಯ, ಸವಿತಾ ತೊಟದ, ಕಾವ್ಯಾ ಪುರದ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.