ADVERTISEMENT

ಏಜೆನ್ಸಿ ಬದಲು ನೇರ ಕೆಲಸ ಕೊಡಿ

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 11:04 IST
Last Updated 9 ಜೂನ್ 2018, 11:04 IST

ಹಾವೇರಿ: ‘ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳಲ್ಲಿ 300ಕ್ಕೂ ಅಧಿಕ ಬಡ ಜನರು ಏಜೆನ್ಸಿ ಮೂಲಕ ಕಡಿಮೆ ಸಂಬಳದಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಅವರಿಗೆ ಏಜೆನ್ಸಿ ಬದಲಾಗಿ ನೇರವಾಗಿ ಕೆಲಸ ಕೊಡಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಮಾಲತೇಶ ಬನ್ನಿಮಟ್ಟಿ ಒತ್ತಾಯಿಸಿದರು.

ನಗರದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ನಡೆದ ‘ಸಾಮಾನ್ಯ ಸಭೆ’ಯಲ್ಲಿ ಅವರು ಮಾತನಾಡಿದರು. ಏಜೆನ್ಸಿಗಳು ಇಲಾಖೆ ಅಥವಾ ಸರ್ಕಾರದಿಂದ ಕನಿಷ್ಠ ವೇತನ ಪಡೆದರೂ ಸಹ, ಅವರಿಗೆ ಅದನ್ನು ನೀಡದೇ ಸೇವಾ ಶುಲ್ಕ ಅದು–ಇದು ಎಂದು ಅರ್ಧ ಸಂಬಳವನ್ನೇ ಕಡಿತ ಮಾಡಿಕೊಳ್ಳುತ್ತವೆ. ಇದರಿಂದ ಕೆಲಸ ಮಾಡುವವರಿಗೆ ಅತ್ಯಂತ ಕಡಿಮೆ ಸಂಬಳ ದೊರೆಯುತ್ತದೆ. ಆದ್ದರಿಂದ, ಇಲಾಖೆಗಳು ಖಾಲಿ ಇರುವ ಹುದ್ದೆಗಳಿಗೆ ನೇರವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎ.ಜೆ.ಪಾಟೀಲ, ‘ಗುತ್ತಿಗೆ ಆಧಾರದಲ್ಲಿ ಏಜೆನ್ಸಿಗಳ ಮೂಲಕವೇ ತುಂಬಿಕೊಳ್ಳಬೇಕು ಎಂಬುದು ಸರ್ಕಾರದ ನಿಯಮವಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ಸದಸ್ಯ ಸತೀಶ ಸಂದಿಮನಿ ಮಾತನಾಡಿ, ‘ಕಳೆದ ಮುಂಗಾರಿನಲ್ಲಿ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ, ಪ್ರತಿಯೊಬ್ಬರ ಜಮೀನಿಗೆ ಖುದ್ದಾಗಿ ಭೇಟಿ ಮಾಡಿ ಆಣೆವಾರಿ ಮಾಡಲಾಯಿತು. ಆದರೆ, ಈವರೆಗೂ ಬೆಳೆ ಪರಿಹಾರ ರೈತರ ಖಾತೆಗೆ ಜಮೆ ಆಗಿಲ್ಲ’ ಎಂದರು.

ಸದಸ್ಯೆ ಶಾರದಾ ದೊಡಮನಿ ಮಾತನಾಡಿ, ‘ತಾಲ್ಲೂಕಿನ ಬಹುತೇಕ ವಸತಿ ನಿಲಯಗಳಿಗೆ ಖುದ್ದು ಭೇಟಿ ನೀಡಿದಾಗಲೂ ಕೂಡ, ಮೇಲ್ವಿಚಾರಕರು ಇರುವುದೇ ಇಲ್ಲ. ಬದಲಾಗಿ, ವಿದ್ಯಾರ್ಥಿಗಳು ಅಥವಾ ಅಡುಗೆ ಸಹಾಯಕರು ನಿಲಯ ನೋಡಿಕೊಳ್ಳುತ್ತಿರುತ್ತಾರೆ’ ಎಂದು ದೂರಿದರು.

ಅವರೊಂದಿಗೆ ಧ್ವನಿಗೂಡಿಸಿದ ಸದಸ್ಯ ಸತೀಶ ಸಂದಿಮನಿ, ‘ಎಷ್ಟೋ ನಿಲಯಗಳಲ್ಲಿ ವಿದ್ಯಾರ್ಥಿಗಳೇ ಮಾರುಕಟ್ಟೆಯಿಂದ ತರಕಾರಿ ತರುವುದನ್ನು ನಾವು ಸ್ವತಃ ನೋಡಿದ್ದೇನೆ’ ಎಂದು ಬೇಸರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎಚ್‌.ಇಮ್ಮಡಿ, ‘ತಾಲ್ಲೂಕಿನಲ್ಲಿ ಕೆಲವು ಮೇಲ್ವಿಚಾರಿಗೆ ಎರಡು ವಸತಿ ನಿಲಯಗಳ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ, ಕೆಲವು ನಿಲಯಗಳಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ’ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪ್ರಭಾಕರ ಕುಂದೂರ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಯೋಜನೆ ಅನುಸಾರವಾಗಿ, ತಾಲ್ಲೂಕಿನ ಎಲ್ಲ ‘ಟಿಬಿ’ ರೋಗಿಗಳಿಗೆ ಪ್ರತಿ ತಿಂಗಳ ₹500 ಮಾಸಾಶನ ನೀಡಲಾಗುವುದು. ಕಳೆದ ಏಪ್ರಿಲ್‌ 1ರಿಂದ ಆ ಯೋಜನೆ ಜಾರಿಯಾಗಿದ್ದು, ತಾಲ್ಲೂಕಿನಲ್ಲಿ ಈ ವರೆಗೆ ಒಟ್ಟು 13 ಜನರನ್ನು ಗುರುತಿಸಲಾಗಿದೆ’ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಉಪಾಧ್ಯಕ್ಷೆ ನಾಗಮ್ಮ ಬಂಕಾಪುರ, ತಹಶೀಲ್ದಾರ್‌ ನವೀನ ಹುಲ್ಲೂರ ಹಾಗೂ ಸದಸ್ಯ ಪ್ರಕಾಶ ಗುಂಡಜ್ಜನವರ ಇದ್ದರು.

ಯಾವುದೇ ಯೋಜನೆಗಳು ಅನುಷ್ಠಾನವಾಗುವ ಮೊದಲು, ಎಲ್ಲ ಅಧಿಕಾರಿಗಳು ತಾಲ್ಲೂಕು ಪಂಚಾಯ್ತಿಗೆ ಹಾಗೂ ಸದಸ್ಯರಿಗೆ ಮಾಹಿತಿ ನೀಡಬೇಕು
ಎ.ಜೆ.ಪಾಟೀಲ, ‌ಇ.ಒ, ಹಾವೇರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.