ADVERTISEMENT

ಒಳಗೆ ಎಣಿಕೆ, ಹೊರಗೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಮೇ 2018, 12:16 IST
Last Updated 16 ಮೇ 2018, 12:16 IST

ಹಾವೇರಿ: ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ನಡೆದಿದ್ದು, ಪ್ರತಿ ಸುತ್ತಿನ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬೆಂಬಲಿಗರ ಘೋಷಣೆಗಳು ಮೊಳಗಿದವು. ಅಂತಿಮ ಸುತ್ತಿನ ಫಲಿತಾಂಶ ಹೊರಬಿದ್ದ ತಕ್ಷಣವೇ ಕೂಗಾಟ, ಜೈಕಾರ, ಪಟಾಕಿಗಳ ಅಬ್ಬರ, ಹೂ –ಹಾರ, ಬಣ್ಣಗಳ ಸಿಂಚನ ಜೋರಾಗಿತ್ತು.

ಕಾಲೇಜಿನ ಎದುರಿನ ಖಾಲಿ ಜಾಗ, ಪಕ್ಕದ ರಸ್ತೆ ಹಾಗೂ ಸಮೀಪದ ಗುಡ್ಡದ ಮೇಲೆ ಸಹಸ್ರಾರು ಜನರು ಜಮಾಯಿಸಿದ್ದರು. ಪ್ರತಿ ಸುತ್ತಿನ ಮತ ಎಣಿಕೆಯಲ್ಲಿ ತಮ್ಮ ಪಕ್ಷ ಅಥವಾ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದರೆ ಕೇಕೆ, ಜೈಕಾರಗಳನ್ನು ಹಾಕುತ್ತಿದ್ದರು.

ಹಿನ್ನಡೆ ಸಾಧಿಸಿದ ಪಕ್ಷಗಳ ಬೆಂಬಲಿಗರು ತಣ್ಣನೆ ಹಿಂದೆ ಸರಿದು, ಸಮೀಪದ ಗುಡ್ಡದ ಮೇಲೆ ಏರಿ ಚರ್ಚೆಯಲ್ಲಿ ನಿರತರಾಗುತ್ತಿದ್ದರು.

ADVERTISEMENT

ಹಾನಗಲ್‌ ಹಾಗೂ ಹಿರೇಕೆರೂರ ಕ್ಷೇತ್ರದ ಎಣಿಕೆ ಸಂದರ್ಭದ ಪ್ರತಿ ಹಂತದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಇದ್ದು, ಬೆಂಬಲಿಗರ ಕುತೂಹಲ ಹೆಚ್ಚಿತ್ತು.

ಮುನ್ನಡೆ ಸಾಧಿಸಿದ್ದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಮತ್ತಿತರರ ಬೆಂಬಲಿಗರು ಪಟಾಕಿ ಸಿಡಿಸಿ, ಬಣ್ಣ ಎರಚಿಕೊಂಡು, ಪಕ್ಷದ ಧ್ವಜ ಹಿಡಿದು, ಟೋಪಿಯನ್ನು ಧರಿಸಿ ಕುಣಿದು ಕುಪ್ಪಳಿಸುತ್ತಿದ್ದರು. ಹಿನ್ನಡೆ ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಸಪ್ಪೆ ಮೋರೆ ಮಾಡಿಕೊಂಡು ಮನೆಯತ್ತ ಮರಳಿದರು.

ಪೊಲೀಸ್‌ ಬಂದೋಬಸ್ತ್‌: 
ಮತ ಎಣಕೆಗೆ ಜಿಲ್ಲಾಡಳಿತವು ಸಕಲ ವ್ಯವಸ್ಥೆಗಳನ್ನು ಮಾಡಿದ ಕಾರಣ, ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಎಲ್ಲಿಯೂ ಗೊಂದಲಗಳು ಉಂಟಾಗಲಿಲ್ಲ. ಮತ ಎಣಿಕೆ ಕೇಂದ್ರದ ಎದುರು ಸಹಸ್ರಾರು ಬೆಂಬಲಿಗರು ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹಾಗೂ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಿದ್ದರು. ಹೀಗಾಗಿ, ಹೆಚ್ಚಿನ ಸಮಸ್ಯೆಗಳು, ಅಹಿತಕರ ಘಟನೆಗಳು ತಲೆದೋರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.