ADVERTISEMENT

ಕಟ್ಟಡ ಮುಗಿದರೂ ರಸ್ತೆ ಕೆಲಸ ಅಪೂರ್ಣ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ರಾಣಿ ಚನ್ನಮ್ಮ ವಸತಿಯುತ ಬಾಲಕಿಯರ ಪ್ರೌಢ ಶಾಲೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 13:20 IST
Last Updated 26 ಮೇ 2018, 13:20 IST
ಬ್ಯಾಡಗಿ ಪಟ್ಟಣದ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಅಕಾಡೆಮಿಕ್ ಹಾಲ್‌ ಎದುರಿನ ರಸ್ತೆಯಲ್ಲಿ ಖಡಿ ಹಾಕಿ ಬಿಟ್ಟಿರುವುದು
ಬ್ಯಾಡಗಿ ಪಟ್ಟಣದ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಅಕಾಡೆಮಿಕ್ ಹಾಲ್‌ ಎದುರಿನ ರಸ್ತೆಯಲ್ಲಿ ಖಡಿ ಹಾಕಿ ಬಿಟ್ಟಿರುವುದು   

ಬ್ಯಾಡಗಿ: ಪಟ್ಟಣದ ಅಗ್ನಿ ಶಾಮಕ ಠಾಣೆಯ ಬಳಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ರಾಣಿ ಚನ್ನಮ್ಮ ವಸತಿಯುತ ಬಾಲಕಿಯರ ಪ್ರೌಢ ಶಾಲೆಯು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಉದ್ಘಾಟನೆಗೊಂಡಿದೆ. ಆದರೆ, ಶಾಲೆ ಆರಂಭದ ದಿನ ಸಮೀಪಿಸುತ್ತಿದ್ದರೂ, ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮಾತ್ರ ನನೆಗುದಿಗೆ ಬಿದ್ದಿದೆ.

ಇಲ್ಲಿ ಸಿಬ್ಬಂದಿ ವಸತಿಗೃಹ, ರಂಗಮಂದಿರ, ಕಾಂಪೌಂಡ್‌ ನಿರ್ಮಿಸಲಾಗಿದೆ. ಕಟ್ಟಡ ಉದ್ಘಾಟನೆಗೊಂಡು ಎರಡು ತಿಂಗಳು ಕಳೆದಿದೆ. ಆದರೆ, ರಸ್ತೆ ಕಾಮಗಾರಿ ಮಾತ್ರ ಅಪೂರ್ಣಗೊಂಡಿದೆ.

ಚುನಾವಣೆಯ ಕಾರಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ತುರಾತುರಿಯಲ್ಲಿ ಉದ್ಘಾಟಿಸಲಾಗಿತ್ತು. ಬಳಿಕ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಸ್ತೆಗೆ ಖಡಿ ಹರಡಿ ಅದರ ಮೇಲೆ ಎಂಸ್ಯಾಂಡ್ ಹಾಕಿದ್ದಾರೆ. ಬಳಿಕ ಯಾವುದೇ ಕೆಲಸ ನಡೆದಿಲ್ಲ. ಒಂದೆಡೆ ಖಡಿ ಹಾಕಿದ ಕಾರಣ ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ADVERTISEMENT

ಶಾಲಾ ಆವರಣದಲ್ಲಿ ಅಕಾಡೆಮಿಕ್ ವಿಭಾಗ, ವಸತಿ ನಿಲಯ ವಿಭಾಗ ಮತ್ತು ಊಟದ ಹಾಲ್ ಎದುರಿನ ರಸ್ತೆಗಳ ಕಾಮಗಾರಿಯೂ ಅಪೂರ್ಣಗೊಂಡಿವೆ. ಇದರಿಂದ ಶಾಲಾ ಮಕ್ಕಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ಮಾಜಿ ಸೈನಿಕ ರಾಜಣ್ಣ ಹೊಸಳ್ಳಿ ದೂರಿದರು.

‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಕಾಮಗಾರಿ ಗುತ್ತಿಗೆ ನೀಡಿದೆ. ಈ ಬಗ್ಗೆ ಇಲಾಖೆಯ ಎಂಜಿನಿಯರ್‌ ಶ್ರೀಧರ್ ಮೂಲಕ ಪರಿಶೀಲನೆ ನಡೆಸಲಾಗುವುದು’ ಎಂದು ಪರಿಶಿಷ್ಟ ಪಂಗಡ ಜಿಲ್ಲಾ ಮಟ್ಟದ ಅಧಿಕಾರಿ ಸುರೇಶ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ರಸ್ತೆ ಡಾಂಬರೀಕರಣ ಮಾಡುವಂತೆ ಹಲವಾರು ಬಾರಿ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ’ ಎಂದು ಪ್ರಾಚಾರ್ಯ ಸದಾನಂದ ಕೋಡಿಹಳ್ಳಿ ಮಾಹಿತಿ ನೀಡಿದರು.
**
ಮಳೆಯಿಂದಾಗಿ ರಸ್ತೆ ಕಾಮಗಾರಿ ನಡೆದಿಲ್ಲ. ಅಲ್ಲದೇ, 800 ಮೀಟರ್ ಮಾತ್ರ ಡಾಂಬರೀಕರಣ ಮಾಡಬೇಕಾದ ಕಾರಣ ಮಿಕ್ಸಿಂಗ್ ಯಂತ್ರವೂ ಸಿಗುತ್ತಿಲ್ಲ
ಬಸವರಾಜ, ಗುತ್ತಿಗೆದಾರ

–ಪ್ರಮೀಳಾ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.