ADVERTISEMENT

ಕಡಿಮೆಯಾದ ಮುಂಗಾರಿನ ಅರ್ಭಟ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 6:15 IST
Last Updated 20 ಜೂನ್ 2012, 6:15 IST
ಕಡಿಮೆಯಾದ ಮುಂಗಾರಿನ ಅರ್ಭಟ
ಕಡಿಮೆಯಾದ ಮುಂಗಾರಿನ ಅರ್ಭಟ   

ಹಾವೇರಿ: ಜಿಲ್ಲೆಯಾದ್ಯಂತ ಮಳೆಯ ಅರ್ಭಟ ಕಡಿಮೆಯಾದರೂ ಮಂಗಳವಾರ ಬೆಳಗಿನವರೆಗೆ ಜಿಲ್ಲೆಯಲ್ಲಿ 64.5.ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಸೋಮವಾರ ಸಂಜೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಆಗಾಗಾ ಮಳೆ ಹನಿ ಉದುರಿದರೂ ಮಳೆ ಮಾತ್ರ ಆಗಲಿಲ್ಲ. ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಗಿನವರೆಗೆ ಜಿಲ್ಲೆಯಲ್ಲಿ 64.5 ಮಿ.ಮೀ.ಮಳೆಯಾಗಿದ್ದು, ಹಾನಗಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 21.5 ಮಿ.ಮೀ. ಮಳೆಯಾದರೆ, ರಾಣೆಬೆನ್ನೂರ ತಾಲ್ಲೂಕಿನಲ್ಲಿ ಅತಿ ಕಡಿಮೆ 3.0 ಮಿ.ಮೀ. ಮಳೆ ಬಿದ್ದ ವರದಿಯಾಗಿದೆ.

ಉಳಿದಂತೆ ಹಾವೇರಿ ತಾಲ್ಲೂಕಿನಲ್ಲಿ 12.2 ಮಿ.ಮೀ., ಹಿರೇಕೆರೂರ ತಾಲ್ಲೂಕಿನಲ್ಲಿ 8.6 ಮಿ.ಮೀ., ಬ್ಯಾಡಗಿ ತಾಲ್ಲೂಕಿನನಲ್ಲಿ 11.0 ಮಿ.ಮೀ., ಶಿಗ್ಗಾವಿ ತಾಲ್ಲೂಕಿನಲ್ಲಿ 4.6 ಮಿ.ಮೀ. ಹಾಗೂ ಸವಣೂರು ತಾಲ್ಲೂಕಿನಲ್ಲಿ 3.6 ಮಿ.ಮೀ. ಮಳೆ ಬಿದ್ದಿದೆ ಎಂದು ಜಿಲ್ಲಾ ಅಂಕಿ ಸಂಖ್ಯೆ ಇಲಾಖೆ ತಿಳಿಸಿದೆ.

ಜಿಲ್ಲೆಯ ವಾರ್ಷಿಕ ಮಳೆ ಸರಾಸರಿ 777.4 ಮಿ.ಮೀ.ಇದ್ದು, ಜೂನ್ ತಿಂಗಳಲ್ಲಿ ಸರಾಸರಿ 105.3 ಮಿ.ಮೀ.ನಷ್ಟು ಮಳೆ ಬೀಳಬೇಕಿದೆ. ಆದರೆ ಪ್ರಸಕ್ತ ಜೂನ್ ತಿಂಗಳ ಇಂದಿನವರೆಗೆ ಕೇವಲ 25.4 ಮಿ.ಮೀ.ನಷ್ಟು ಸುರಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.

ಕೃಷಿ ಇಲಾಖೆ  ಜಿಲ್ಲೆಯಾದ್ಯಂತ ಈ ಮುಂಗಾರು ಹಂಗಾಮಿನಲ್ಲಿ ರೈತರಿಗೆ 13,000 ಕ್ವಿಂಟಲ್ ವಿವಿಧ ಬಿತ್ತನೆ ಬೀಜ ಹಾಗೂ 97,390 ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ರೈತರು ಮಳೆ ನಿರೀಕ್ಷೆಯಲ್ಲಿಯೇ ಬೀಜ, ಗೊಬ್ಬರ ಸಂಗ್ರಹಿಸಿಟ್ಟುಕೊಳ್ಳಲು ಆರಂಭಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ 32ರಷ್ಟು ಪ್ರಮಾಣ ಬಿತ್ತನೆ ಬೀಜ ಹಾಗೂ ಶೇ 25 ರಷ್ಟು ರಸಗೊಬ್ಬರ ವಿತರಣೆಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಕೆಂಪರಾಜು ತಿಳಿಸಿದ್ದಾರೆ.

ಬಹುತೇಕ ರೈತರು ಮಳೆ ನಿರೀಕ್ಷೆಯಲ್ಲಿ ಈಗಾಗಲೇ ಭೂಮಿಯನ್ನು ಹದಮಾಡಿ ಇಟ್ಟುಕೊಂಡಿದ್ದು, ಬಿತ್ತನೆಗೆ ಅಗತ್ಯ ಮಳೆ ಬಿದ್ದಿರುವ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಬಹುದು. ಆದರೆ, ಮಳೆ ನಿರೀಕ್ಷೆಯಲ್ಲಿ  ಒಣ ಪ್ರದೇಶದಲ್ಲಿ ಬಿತ್ತನೆ ಮಾಡಬಾರದು ಎಂದು ಅವರು ರೈತರಿಗೆ ಸಲಹೆ ನೀಡಿದ್ದಾರೆ.

ಜಾರಿ ಬಿದ್ದ ಜನರು: ಹಾವೇರಿ ನಗರದ ಎಂ.ಜಿ.ರಸ್ತೆ ಮಳೆಯಿಂದ ಸಂಪೂರ್ಣ ಕೆಸರುಮಯವಾಗಿದ್ದು, ಜನರು ನಡೆದಾಡಲು ಸಹ ಕಷ್ಟಪಡಬೇಕಾಗಿದೆ. ಸೋಮವಾರ ಒಂದೇ ದಿನ ಸುಮಾರು 15 ಜನರು ಕೆಸರಿನಲ್ಲಿ ಜಾರಿ ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ.

ಈ ಹಿಂದೆಯೇ ಅತಿಕ್ರಮಣ ತೆರವು ಸಂದರ್ಭದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ದುರಸ್ತಿ ಮಾಡಿಸಬೇಕೆಂದು ಒತ್ತಾಯಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ನಗರದ ನಾಗರಿಕರು ಆರೋಪಿಸಿದ್ದಾರೆ.

ರಸ್ತೆ ವೀಕ್ಷಣೆ: ನಗರ ಸುಧಾರಣಾ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಇಲ್ಲಿನ ಎಂ.ಜಿ.ರಸ್ತೆ ಮಳೆಯಿಂದ ಆಗಿರುವ ದುಸ್ಥಿತಿಯ ಬಗ್ಗೆ ಮಂಗಳವಾರ ವೀಕ್ಷಣೆ ಮಾಡಿದರಲ್ಲದೇ. ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಹಾಗೂ ನಗರ ಅಭಿವೃದ್ಧಿ ಬಗ್ಗೆ ನಿಷ್ಕಾಳಜಿ ವಹಿಸಿರುವ ನಗರಸಭೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರ ಸುಧಾರಣ ಸಮಿತಿ ಅಧ್ಯಕ್ಷ ಡಾ.ಸಂಜಯ ಡಾಂಗೆ ಮಾತನಾಡಿ, ಎಂ.ಜಿ.ರಸ್ತೆಯ ನಿರ್ಮಾಣ ಕಾರ್ಯವನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ನಗರ ಸುಧಾರಣಾ ಸಮಿತಿ ಗಡುವು ನೀಡಿದರೂ. ನಗರಸಭೆ ಅದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತಾಳುವ ಮೂಲಕ ನಗರದ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಸಮಿತಿ ಕಾರ್ಯದರ್ಶಿ ಹಾಗೂ ವಕೀಲ ವೀರೇಶ ಜಾಲವಾಡಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ವ್ಯಾಪಾರಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.