ADVERTISEMENT

ಕನ್ನಡದ ಪಕ್ಷವಾಗಿ ನಿಲ್ಲಿ: ಪಾಪು

ಸವಣೂರ: ಡಾ.ವಿ.ಕೃ ಗೋಕಾಕ ಸಾಂಸ್ಕೃತಿಕ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 10:20 IST
Last Updated 16 ಮಾರ್ಚ್ 2018, 10:20 IST
ಸವಣೂರಿನಲ್ಲಿ ಗುರುವಾರ ನಡೆದ ಡಾ.ವಿ.ಕೃ.ಗೋಕಾಕರ ಸಾಂಸ್ಕೃತಿಕ ಭವನ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ, ವಿ.ಕೃ.ಗೋಕಾಕ ಅವರ ಪುತ್ರರಾದ ನಿವೃತ್ತ ಐಎಎಸ್ ಅಧಿಕಾರಿ ಅನಿಲ ಗೋಕಾಕ ಹಾಗೂ ಕವಿ ಚೆನ್ನವೀರ ಕಣವಿ ಕುಶಲೋಪರಿಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ
ಸವಣೂರಿನಲ್ಲಿ ಗುರುವಾರ ನಡೆದ ಡಾ.ವಿ.ಕೃ.ಗೋಕಾಕರ ಸಾಂಸ್ಕೃತಿಕ ಭವನ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ, ವಿ.ಕೃ.ಗೋಕಾಕ ಅವರ ಪುತ್ರರಾದ ನಿವೃತ್ತ ಐಎಎಸ್ ಅಧಿಕಾರಿ ಅನಿಲ ಗೋಕಾಕ ಹಾಗೂ ಕವಿ ಚೆನ್ನವೀರ ಕಣವಿ ಕುಶಲೋಪರಿಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ   

ಸವಣೂರ (ಹಾವೇರಿ ಜಿಲ್ಲೆ): ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತಿತರ ಪಕ್ಷಗಳು ಚುನಾವಣೆಗೆ ಸೀಮಿತವಾಗಿದ್ದು, ‘ಕನ್ನಡ’ದ ವಿಚಾರ ಬಂದಾಗ ಎಲ್ಲರೂ ಕನ್ನಡದ ಪಕ್ಷವಾಗಿ ನಿಲ್ಲಬೇಕು ಎಂದು ಸಾಹಿತಿ ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು.

ಡಾ.ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಇಲ್ಲಿ ನಿರ್ಮಾಣಗೊಂಡ ಡಾ.ವಿ.ಕೃ ಗೋಕಾಕ ಸಾಂಸ್ಕೃತಿಕ ಭವನದ ಉದ್ಘಾಟನೆ ಮತ್ತು ಗೋಕಾಕರ ಚಿತ್ರಸಂಪುಟ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಪ್ರಾಚೀನ ಭಾಷೆಯಾದರೂ, ದೇಶದ ಭಾಷೆಗಳ ಪೈಕಿ ಹಿಂದಿಗೆ ಮಹತ್ವ ನೀಡಲಾಗುತ್ತಿದೆ. ಕನ್ನಡವು ಅಲೆಕ್ಸಾಂಡರ್ ಕಾಲದಲ್ಲೇ ಇತ್ತು ಎಂಬುದಕ್ಕೆ ಈಜಿಪ್ಟ್ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಟ್ಟಿರುವ ಪಪೈರಸ್ ಎಲೆಯಲ್ಲಿನ ‘ಊರು’ ಎಂಬ ಬರಹವೇ ಸಾಕ್ಷಿ ಎಂದರು.

ADVERTISEMENT

‘ಕನ್ನಡದ ಎಲ್ಲ ಕೃತಿಗಳನ್ನು ಹೊಂದಿದ  ಗ್ರಂಥಾಲಯವು ಸವಣೂರಿನಲ್ಲಿ ನಿರ್ಮಾಣಗೊಳ್ಳ ಬೇಕು. ಕನ್ನಡದ ಯಾವುದೇ ಕೃತಿ ನೋಡಬೇಕಾದರೂ ಸವಣೂರಿಗೆ ಬರುವಂತಾಗಬೇಕು. ಅಂಥ ಗ್ರಂಥಾಲಯವನ್ನು ರೂಪಿಸಿ’ ಎಂದರು.

ಸಚಿವ ಸ್ಥಾನಮಾನ ಹೊಂದಿದ್ದ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ತಿಂಗಳಿಗೆ ಒಂದು ರೂಪಾಯಿ ಸಂಬಳ ಪಡೆದಿದ್ದೇನೆ ಎಂದ ಅವರು, ಈಗೀಗ ಸಚಿವರು ಜಿಲ್ಲೆಗೆ ಬರುತ್ತಾರೆ ಎಂದರೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಸತ್ತೇ ಹೋಗುತ್ತಾರೆ. ಅವರಿಗೆ ಊಟೋಪಚಾರ ಮಾತ್ರ ವಲ್ಲದೇ, ಕೆಲವರಿಗೆ ಆ ಬಳಿಕವೂ ಏನೇನೋ ಬೇಕಾಗುತ್ತದೆ ಎಂದರು.

ಸೌಹಾರ್ದತೆ: ಸವಣೂರಿನ ನವಾಬರು ಕನ್ನಡದ ಬಗ್ಗೆ ಅಪಾರ ಗೌರವ ಹೊಂದಿದ್ದರು. ಹುಬ್ಬಳ್ಳಿಯ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾಗಿದ್ದರು. ವಿ.ಕೃ.ಗೋಕಾಕರು ಇಂಗ್ಲೆಂಡ್‌ನಲ್ಲಿ ಕಲಿತು ವಾಪಾಸ್ ಬರುವ ವೇಳೆ, ಖುದ್ದು ಹೋಗಿ ಗೌರವಿಸಿದ್ದರು. ಇಂತಹ ಸಾಮರಸ್ಯದ ಸವಣೂರ ನೆಲದಲ್ಲಿ ನಡೆ ಯುವ ವಿ.ಕೃ.ಗೋಕಾಕರ ಮುಂದಿನ ಕಾರ್ಯಕ್ರಮಕ್ಕೆ ನವಾಬರ ಮನೆತನ ದವರೇ ಅತಿಥಿಗಳಾಗಿರಬೇಕು ಎಂದರು.

ನವೋದಯದ ಹೊಸ ಶಕೆಯ ಮೇರು ವ್ಯಕ್ತಿತ್ವ ವಿ.ಕೃ.ಗೋಕಾಕರು. ಸವಣೂರು ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಬಣ್ಣಿಸಿದರು.

ಸಾಹಿತಿ ಚೆನ್ನವೀರ ಕಣವಿ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಬೊಮ್ಮಾಯಿ, ಸಾಹಿತಿ ಡಾ.ರಮಾಕಾಂತ ಜೋಶಿ, ವಿ.ಕೃ.ಗೋಕಾಕರ ಪುತ್ರ ಅನಿಲ ಗೋಕಾಕ, ಡಾ. ಜಿ.ಎಂ. ಹೆಗಡೆ ಇದ್ದರು.

‘ದೊಡ್ಡ ವ್ಯಕ್ತಿ ನಾನೇ’
ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಲಾಲ್ ಬಹುದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳನ್ನು ನೋಡಿದ ‘ದೊಡ್ಡ ವ್ಯಕ್ತಿ ’ ನಾನೇ ಎಂದು ಹೇಳಿದ ಸಾಹಿತಿ ಪಾಟೀಲ ಪುಟ್ಟಪ್ಪ, ‘ನಾನು ನೋಡದ ದೊಡ್ಡ ವ್ಯಕ್ತಿಗಳೇ ಇಲ್ಲ’ ಎಂದರು.

ಸಂತೆ ಸೂಳೆ ಹಿಂದೆ ಹೋಗಬೇಡಿ: ‘ಪ್ರೀತಿಯ ಹೆಂಡತಿಯನ್ನು ಬಿಟ್ಟು ಸಂತೆ ಸೂಳೆಯ ಹಿಂದೆ ಹೋಗಬೇಡಿ’ ಎಂದು ಇಂಗ್ಲಿಷ್ ವ್ಯಾಮೋಹದ ಕುರಿತು ಕುಟುಕಿದ ಪಾಟೀಲ ಪುಟ್ಟಪ್ಪ, ‘ಇಂಗ್ಲಿಷ್ ಬಂದರೆ ಜಗತ್ತನ್ನೇ ಸುತ್ತಬಹುದು ಎಂಬ ಭ್ರಮೆ ಬೇಡ. ಫ್ರಾನ್ಸ್, ಜರ್ಮನ್, ಚೀನಾ, ರಷ್ಯಾ ದೇಶಗಳಲ್ಲಿ ಇಂಗ್ಲಿಷ್‌ ಇಲ್ಲ. ಅವರೆಲ್ಲ ಮಾತೃಭಾಷೆಗೆ ಆದ್ಯತೆ ನೀಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.