ADVERTISEMENT

ಕಬ್ಬು ನುರಿಯುವ ಕಾರ್ಯ ಶೀಘ್ರ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 8:40 IST
Last Updated 7 ಫೆಬ್ರುವರಿ 2012, 8:40 IST
ಕಬ್ಬು ನುರಿಯುವ ಕಾರ್ಯ ಶೀಘ್ರ ಮುಕ್ತಾಯ
ಕಬ್ಬು ನುರಿಯುವ ಕಾರ್ಯ ಶೀಘ್ರ ಮುಕ್ತಾಯ   

ಹಾವೇರಿ: `ಕೆಲ ಸಣ್ಣ ಪುಟ್ಟ ತಾಂತ್ರಿಕ ಅಡಚಣೆಯಿಂದ ಸಂಗೂರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯ ನಿಧಾನವಾಗಿದೆ. ಅವುಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಬರುವ ಮಾರ್ಚ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಕಬ್ಬು ನುರಿಸುವ ಹಂಗಾಮು ಮುಗಿಯಲಿದೆ~ ಎಂದು ಜಿ.ಎಂ.ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಲಿಂಗರಾಜ ವಿಶ್ವಾಸ ವ್ಯಕ್ತಪಿಡಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಯನ್ನು ಸಂಪೂರ್ಣ ನವೀಕರಣಗೊಳಿಸಿ, ಹೊಸ ಹಾಗೂ ಆಧುನಿಕ ಯಂತ್ರೋಪಕರಣಗಳ ಜೋಡಣೆ ಮಾಡಲಾಗಿದೆ. ಈ ಯಂತ್ರೋಪಕರಣಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಅಣಿಯಾಗುವ ಸಂದರ್ಭದಲ್ಲಿ ಕೆಲ ಸಣ್ಣ ಪುಟ್ಟ ಅಡಚಣೆಗಳು ಎದುರಾಗುತ್ತಿವೆ. ಅದೇ ಕಾರಣಕ್ಕೆ ಕಬ್ಬು ಅರೆಯುವ ಪ್ರಕ್ರಿಯೆಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಶೀಘ್ರದಲ್ಲಿಯೇ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಬ್ಬು ನುರಿಸಲಿದೆ~  ಎಂದರು.

ಕಳೆದ ಒಂದು ತಿಂಗಳಲ್ಲಿ ಸುಮಾರು 42 ಸಾವಿರ ಟನ್ ಕಬ್ಬು ನುರಿಸಲಾಗಿದ್ದು, ಇನ್ನೂ ಒಂದೂವರೆ ಲಕ್ಷ ಟನ್ ಕಬ್ಬು ನುರಿಸುವುದು ಬಾಕಿಯಿದೆ. ಅಡಚಣೆಗಳ ಮಧ್ಯೆಯೂ ಪ್ರತಿ ದಿನ 1600ರಿಂದ 1800 ಟನ್ ವರೆಗೆ ಕಬ್ಬು ನುರಿಸುವ ಕಾರ್ಯ ಚಾಲ್ತಿಯಲ್ಲಿದೆ. ಸಂಪೂರ್ಣ ಹೊಸ ಯಂತ್ರೋಪಕರಣಗಳು ಜೋಡಿಸಿದ್ದರಿಂದ ಅವು ಹೊಂದಾಣಿಕೆಯಾಗಲು ಹಾಗೂ ಹೊಸ ಯಂತ್ರೋಪಕರಣಗಳಿಗೆ ಸಿಬ್ಬಂದಿ ಹೊಂದಿಕೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕಾಗಲಿದೆ ಎಂದು ಹೇಳಿದರು.

ರಿಕವರಿ ಕಡಿಮೆ: ಈಗಾಗಲೇ 42 ಸಾವಿರ ಟನ್ ಕಬ್ಬು ನುರಿಸಲಾ ಗಿದ್ದರೂ ಕಬ್ಬಿನ ರಿಕವರಿ (ಸಕ್ಕರೆ ಅಂಶ) ಮಾತ್ರ ಶೇ 6 ರಿಂದ 7 ರಷ್ಟು ಬಂದಿದೆ. ಇದು ಬಹಳ ಕಡಿಮೆ ರಿಕವರಿ ಎಂದೇ ಹೇಳಬಹುದು. ಇದಕ್ಕೆ ಹೊಸ ಯಂತ್ರೋಪಕರಣಗಳು ಹಾಗೂ ಕಾರ್ಖಾನೆಗೆ ಬಂದ ಕಬ್ಬ ಎರಡ್ಮೂರು ದಿನ ಬಿಸಿಲಿನಲ್ಲಿ ಇರುವುದು ಕಾರಣ ಎಂದ ಅವರು, ಮುಂದೆ ದಿನಗಳಲ್ಲಿ ರಿಕವರಿಯಲ್ಲಿ ಸುಧಾರಣೆ ಯಾಗ ಬಹುದು ಎಂದು ಆಶಯ ವ್ಯಕ್ತಪಡಿಸಿದರು.

ವಿದ್ಯುತ್ ಸಮಸ್ಯೆ ನಿವಾರಣೆ: ಕಾರ್ಖಾನೆ ಎದುರಾಗಿದ್ದ ವಿದ್ಯುತ್ ಸಮಸ್ಯೆ ನಿವಾರಣೆಯಾಗಿದ್ದು, ಕಾರ್ಖಾನೆಯಲ್ಲಿ ಉತ್ಪದಾನೆಯಾದ ವಿದ್ಯುತ್‌ನ್ನು ಬೇರೆ ಕಡೆ ಸಾಗಿಸುವ ಪ್ರಕ್ರಿಯೆ ಕೂಡಾ ಆರಂಭವಾಗಿದೆ ಎಂದು ತಿಳಿಸಿದರು ಉಹಾಪೋಹಕ್ಕೆ ಕಿವಿಗೊಡಬೇಡಿ: ಸಕ್ಕರೆ ಕಾರ್ಖಾನೆ ಕಾರ್ಯ ನಿರ್ವಹಿಸುವ ಬಗ್ಗೆ ಇಲ್ಲ ಸಲ್ಲದ ಉಹಾಪೋಹಗಳು ಹುಟ್ಟಿಕೊಳ್ಳು ತ್ತಿದ್ದು, ಯಾವುದೇ ಕಾರಣಕ್ಕೂ ರೈತರು ಅಂತಹ ಉಹಾಪೋಹಗಳಿಗೆ ಕವಿಗೊಡ ಬೇಡಿ. ಜಿಲ್ಲೆಯ ರೈತರ ಎಲ್ಲ ಕಬ್ಬನ್ನು ನುರಿಸುವ ವರೆಗೆ ಕಾರ್ಖಾನೆ ತನ್ನ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದರು.

ಕೆಲ ಮಧ್ಯವರ್ತಿಗಳು ತಮ್ಮ ಸ್ವಾರ್ಥಕ್ಕಾಗಿ ರೈತರಲ್ಲಿ ಭಯ ಹುಟ್ಟುವಂತೆ ಮಾಡಿ, ಅವರ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ನಾಲ್ಕು ವರ್ಷದಲ್ಲಿ ತಾವು ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ರೈತರ ಅನುಕೂಲಕ್ಕೆ ಏನು ಮಾಡಲು ಸಾಧ್ಯವೋ ಎಲ್ಲವನ್ನು ಕಾರ್ಖಾನೆ ಮಾಡಲು ಸಿದ್ಧವಿದೆ ಎಂದು ತಿಳಿಸಿದರು.

ಕಬ್ಬು ನುರಿಸುವ ಕಾರ್ಯ ಈಗ ನಿಧಾನಗತಿಯಲ್ಲಿ ಸಾಗಿದರೂ ಬರುವ ದಿನಗಳಲ್ಲಿ ತನ್ನ ಸಾಮರ್ಥ್ಯಕ್ಕನುಗುಣವಾಗಿ ಕಬ್ಬು ನುರಿಸಲಿದೆ. ಬಾಕಿ ಉಳಿದಿರುವ ಒಂದೂವರೆ ಲಕ್ಷ ಟನ್ ಕಬ್ಬು ನುರಿಸುವ ಕಾರ್ಯವನ್ನು ಬರುವ ಮಾರ್ಚ ಕೊನೆವಾರ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.