ADVERTISEMENT

ಕಳ್ಳರ ಆತಂಕದಲ್ಲಿ ವಲಸೆ ಕುರಿಗಾರರು!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 7:07 IST
Last Updated 20 ಅಕ್ಟೋಬರ್ 2017, 7:07 IST

ಹಿರೇಕೆರೂರ: ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೆ, ರಾತ್ರಿ ಕತ್ತಲೆಯಲ್ಲಿಯೇ ಕಳೆಯುವ ಅಲೆಮಾರಿ ಕುರಿಗಾರರು ಮಾತ್ರ ಕಳ್ಳರ ಹಾವಳಿಯಿಂದ ಕುರಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಹರಸಾಹಸ ಮಾಡುವಂತಹ ಸ್ಥಿತಿ ಎದುರಾಗಿದೆ.

ಸ್ಥಳೀಯರು, ಹಾನಗಲ್‌ ತಾಲ್ಲೂಕಿನವರು ಹಾಗೂ ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ವಲಸೆ ಬಂದಿರುವ ಹತ್ತಾರು ಕುರಿಗಾರರ ಸುಮಾರು 5 ಸಾವಿರ ಕುರಿಗಳು ಪಟ್ಟಣದ ವ್ಯಾಪ್ತಿಯಲ್ಲಿ ವಾಸ್ತವ್ಯದಲ್ಲಿದ್ದು ಕುರಿ ಕಳ್ಳರ ಹಾವಳಿಗೆ ಆತಂಕ ಅನುಭವಿಸುತ್ತಿದ್ದಾರೆ.

ಮಂಗಳವಾರ ಹಾಡಹಗಲೇ ತಂಬಾಕದ ನಗರದ ಸಮೀಪ ಬೈಕ್‌ನಲ್ಲಿ ಬಂದ ಕುರಿಗಳ್ಳರು ಬೆಳಗಾವಿಯ ಕುರಿಗಾರ ಹಾಲಪ್ಪ ಎಂಬುವವರಿಗೆ ಸೇರಿರುವ ಕುರಿಯೊಂದನ್ನು ಬೈಕ್‌ ಮೇಲೆ ಹಾಕಿಕೊಂಡು ಶಿರಾಳಕೊಪ್ಪ ರಸ್ತೆಯಲ್ಲಿ ಪರಾರಿಯಾಗಿದ್ದಾರೆ. ಇದನ್ನು ಕಂಡ ಕೆಲವರು ಬೆನ್ನಟ್ಟಿದ್ದು ಹೊಲಬೀಕೊಂಡ ಗ್ರಾಮದ ಸಮೀಪ ಗ್ರಾಮಸ್ಥರ ಸಹಕಾರದಿಂದ ಇಬ್ಬರು ಕಳ್ಳರನ್ನು ಹಿಡಿದಿದ್ದಾರೆ.

ADVERTISEMENT

ನಂತರ ಅವರು ಕುರಿಯನ್ನು ಬಿಟ್ಟು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ‘ಇದೇ ರೀತಿ ಕುರಿಗಳ್ಳರ ತಂಡವೊಂದು ಕಾರ್ಯ ನಿರ್ವಹಿಸುತ್ತಿದ್ದು, ಪದೇ ಪದೇ ಕುರಿಗಳ ಕಳ್ಳತನ ನಡೆಯುತ್ತಿದೆ. ಸುಮಾರು 2 ತಿಂಗಳ ಹಿಂದೆ ರಾತ್ರಿ ವೇಳೆಯಲ್ಲಿ ಪಟ್ಟಣದ ಸಮೀಪ ವಾಸ್ತವ್ಯ ಹೂಡಿದ್ದ ಆನಂದಪ್ಪ ಕುರುಬರ ಎಂಬಾತನಿಗೆ ಸೇರಿದ 32 ಕುರಿಗಳನ್ನು ಒಂದೇ ರಾತ್ರಿ ಕದ್ದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ಈ ಕಳ್ಳತನಗಳ ಬಗ್ಗೆ ಪೊಲೀಸರ ಗಮನಕ್ಕೆ ಸಹ ತರಲಾಗಿದೆ. ಆದರೆ ಕಳ್ಳತನ ಕಡಿಮೆಯಾಗಿಲ್ಲ’ ಎಂದು ಕುರಿಗಾರರು ಅಳಲು ತೋಡಿಕೊಂಡರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಚ್.ಎಚ್.ವಡ್ಡರ, ‘ಕುರಿಗಳ ಕಳ್ಳತನದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಪೊಲೀಸ್ ಗಸ್ತು ಹೆಚ್ಚಿಸಿ, ಕಳ್ಳತನ ತಡೆಯಲು ಕ್ರಮ ಕೈಗೊಳ್ಳುತ್ತೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.