ADVERTISEMENT

ಕವಲು ದಾರಿಯಲ್ಲಿ ಭತ್ತದ ಬೇಸಾಯ: ಕಳವಳ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:33 IST
Last Updated 18 ಜೂನ್ 2013, 11:33 IST

ಎಂ.ಕೆ.ಹುಬ್ಬಳ್ಳಿ (ಚನ್ನಮ್ಮನ ಕಿತ್ತೂರು): `ನಿಸರ್ಗದಲ್ಲಿ ಆಗುತ್ತಿರುವ ಅನಿರೀಕ್ಷಿತ ಬದಲಾವಣೆಯಿಂದಾಗಿ ಮಳೆ ಕಡಿಮೆಯಾಗಿದ್ದು, ಕಾಲುವೆಗಳಿಂದ ನೀರು ಹಂಚಿಕೆಯ ಮೇಲೆ ವ್ಯಾಪಕ ದುಷ್ಪರಿಣಾಮ ಬೀರಿ ಭತ್ತದ ಬೇಸಾಯವೇ ಇಂದು ಕವಲುದಾರಿಯಲ್ಲಿದೆ' ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ನಿಂಗರಾಜ ಸುರಳಿಕೇರಿ ಕಳವಳಪಟ್ಟರು.

ಎಂ.ಕೆ. ಹುಬ್ಬಳ್ಳಿಯ ರೈತ ಜಗದೀಶ ಬೆಂಡಿಗೇರಿ ಅವರ ಹೊಲದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ `ನಾಟಿ (ಶ್ರೀ) ಪದ್ಧತಿಯಿಂದ ಬೇಸಾಯ' ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಭತ್ತ, ರಾಜ್ಯದ ಅತಿಮುಖ್ಯ ಬೆಳೆಯಾಗಿದ್ದು, ಈ ಬೆಳೆಯನ್ನು ವರ್ಷದಲ್ಲಿ ಎರಡು ಬಾರಿ ಬೆಳೆಯಬಹುದಾಗಿದೆ. ಅಸಮರ್ಪಕ ಹಾಗೂ ಅಕಾಲಿಕ ಮಳೆಯಿಂದ ಆಗುವ ದುಷ್ಪರಿಣಾಮದ ವಿಚಾರ ಮಾಡಿಯೇ ಶ್ರೀ ಪದ್ಧತಿಯನ್ನು 1980ರಲ್ಲಿ ಆಫ್ರಿಕಾ ಖಂಡದ ಹೆಂಡ್ರಿ ಲಾಲಾನಿ  ಎಂಬ ಫಾದರ್ ಕಂಡು ಹಿಡಿದಿದ್ದು, ನೀರಿನಲ್ಲಿ ಕಡಿಮೆ ಬೀಜ, ಶ್ರಮ ಹಾಗೂ ವೆಚ್ಚ ವ್ಯಯಿಸಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ' ಎಂದರು.

`ಉತ್ತಮ ಬೀಜದ ಆಯ್ಕೆ, ಬೀಜೋಪಚಾರದಿಂದ ಸಸಿಮಡಿ ನಿರ್ಮಾಣ ಮಾಡಿ,  8 ರಿಂದ 12 ದಿನಗಳ ಒಳಗೆ ಸಾಲಿನಿಂದ ಸಾಲಿಗೆ 25 ಚ.ಮೀ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು' ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಅವರು, `ಈ ವಿಧಾನದಿಂದ ನಾಟಿ ಮಾಡಿದರೆ ಪ್ರತಿ ಎಕರೆಗೆ 45ರಿಂದ 50 ಕ್ವಿಂಟಲ್ ಇಳುವರಿ ತೆಗೆಯಬಹುದು' ಎಂದು ತಿಳಿಸಿದರು.

ಕಲ್ಮೇಶ್ವರ ದೇವಸ್ಥಾನದ ಚಂದ್ರಯ್ಯೊ ಹಿರೇಮಠ ಸ್ವಾಮೀಜಿ ಮಾತನಾಡಿ, `ಇಂದಿನ ತಾಂತ್ರಿಕ ಯುಗದಲ್ಲಿ ಬದಲಾವಣೆ ಮುಖ್ಯವಾಗಿದೆ. ಆ ದಿಸೆಯಲ್ಲಿ ರೈತರು ತಮ್ಮ ಕೃಷಿಯಲ್ಲಿ ಹೊಸತನ ಅಳವಡಿಸಿಕೊಳ್ಳಬೇಕು. ಕೃಷಿ ಅವಲಂಬಿತ ಪ್ರದೇಶದಲ್ಲಿ ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ವೈವಿಧ್ಯಮಯ ಬೆಳೆ ಬೆಳೆಯಲು ಮುಂದಾಗಬೇಕು' ಎಂದು ಸಲಹೆ ಇತ್ತರು.
ಎಂಕೆ ಹುಬ್ಬಳ್ಳಿ ವಲಯ ಕೃಷ್ಣಮೂರ್ತಿ ಎನ್. `ಅಕ್ಕಿ ಇದ್ದರೆ ಊಟ, ಮಕ್ಕಳಿದ್ದರೆ ಮನೆ ಎಂಬ ಗಾದೆಯ ಮಾತಿದೆ. ಪ್ರಸ್ತತ ದಿನಗಳಲ್ಲಿ ಬತ್ತದ ಬೇಸಾಯ ಅಗತ್ಯವಾಗಿದೆ. ಆದರೆ ಅನೇಕ ರೈತರು ಪ್ರಮುಖ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ.

ಇದಕ್ಕೆ ಭತ್ತದ ಕೃಷಿಯಲ್ಲಿಯ ಕೆಲ ಅಡೆತಡೆಗಳು ಕಾರಣವಾಗಿವೆ. ಈ ಅಡೆತಡೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾರ್ಗದರ್ಶನ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಿಳಿಸಿದರು.

ಗುರುಲಿಂಗ ಬೆಂಡಿಗೇರಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಕಿತ್ತೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್. ಎಫ್. ಬೆಳವಟಿಕಿ ಉಪಸ್ಥಿತರಿದ್ದರು.

ಹೈನುಗಾರಿಕೆ ಅಧಿಕಾರಿ ಶಿವಾನಂದ ತೋಟದ ಸ್ವಾಗತಿಸಿದರು. ಶಿಲ್ಪಾ ತೋಟಗಿ ನಿರೂಪಿಸಿದರು. ಸೇವಾ ಪ್ರತಿನಿಧಿ ಶೈಲಾ ಜಿರಲಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.