ADVERTISEMENT

`ಕಾನೂನಿನ ಸಾಮಾನ್ಯ ಜ್ಞಾನ ಅಗತ್ಯ'

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:30 IST
Last Updated 19 ಡಿಸೆಂಬರ್ 2012, 8:30 IST

ಬ್ಯಾಡಗಿ: ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಪ್ರತಿಯೊಬ್ಬರೂ ಕಾನೂನಿನ  ಸಾಮಾನ್ಯ ಅರಿವು ಪಡೆಯುವುದು ಸೂಕ್ತ ಎಂದು ದಿವಾಣಿ ನ್ಯಾಯಾಧೀಶ ಬಿ.ಜಿ. ಪ್ರಮೋದ ಅಭಿಪ್ರಾಯಪಟ್ಟರು.

ಸೋಮವಾರ ತಾಲ್ಲೂಕಿನ ಹೆಡಿಗ್ಗೊಂಡ ಗ್ರಾ.ಪಂ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸಂಯುಕ್ತವಾಗಿ ಏರ್ಪಡಿಸಿದ ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆಯ ಕಾನೂನು ಸಾಕ್ಷರತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ಉಚಿತ ಕಾನೂನು ನೆರವು ನೀಡುವುದಲ್ಲದೆ ಅವರ ಸಂರಕ್ಷಣೆಗೆ ಹಲವಾರು ಕಾನೂನುಗಳನ್ನು ರೂಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು. ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದೆಂದು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷೆ ಶೀಲವ್ವ ದೇವಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಚೂರಿ, ಸದಸ್ಯರಾದ ಪಿ.ಬಿ. ಶಿಂಗಿ, ಐ.ಎಸ್. ಎಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಭ್ರೂಣ ಹತ್ಯೆ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಎಂ.ಜೆ. ಮುಲ್ಲಾ ಹಾಗೂ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯನ್ನು ಸಂರಕ್ಷಿಸುವ ಕಾಯ್ದೆ ಮತ್ತು ವರದಕ್ಷಿಣಿ ನಿಷೇಧ ಕಾಯ್ದೆ ಕುರಿತು ಭಾರತಿ ಕುಲ್ಕರ್ಣಿ ಉಪನ್ಯಾಸ ನೀಡಿದರು. ಅನ್ನಪೂರ್ಣಾ ಕಟ್ಟೆಪ್ಪನವರ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT