ರಾಣೆಬೆನ್ನೂರು: ಕರ್ನಾಟಕ ವಿಶ್ವ ವಿದ್ಯಾಲಯದ ಕಾಲೇಜುಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರರಾದ ವಿ.ಎಂ. ಹಿರೇಮಠ ಮತ್ತು ಎಸ್.ಕೆ. ಕಾಮಠೆ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರ ವಿದ್ಯಾರ್ಥಿಗಳಿಂದ ₨ 565 ಶುಲ್ಕ ಕಟ್ಟಿಸಿಕೊಂಡು, ನಂತರ ಮರುಪಾವತಿ ಮಾಡುತ್ತೇವೆಂದು ಹಿಂದಿನ ವರ್ಷಗಳ ವಿದ್ಯಾರ್ಥಿಗಳಿಗೆ ಆಶ್ವಾಸನೆ ಕೊಟ್ಟಿತ್ತು. ಆದರೆ ಈ ವರೆಗೂ ಯಾವುದೇ ಹಣವನ್ನು ಕೊಡದೇ ಮೋಸ ಮಾಡಿದೆ,
ಹಾಗೆಯೇ ಈ ವರ್ಷ ಕೂಡ ಅದೇ ರಾಗ ಹಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.
ನಗರ ಕಾರ್ಯದರ್ಶಿ ದೇವೆಂದ್ರ ಮಾಕನೂರು ಮಾತನಾಡಿ, ₨ 565 ಕಟ್ಟಬೇಕಂತೆ, ನಂತರ ಮರು ಪಾವತಿ ಮಾಡುತ್ತದೆ ಎಂದು ತಿಳಿಸಿದ್ದಾರೆ, ಅಲ್ಲದೇ ಶುಲ್ಕ ತುಂಬಲು ಮಾ.14 ಕೊನೆಯ ದಿನಾಂಕವಾಗಿದ್ದು, ತಪ್ಪಿದರೆ ದಿನಕ್ಕೆ ನೂರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ, ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆರೋಪಿಸಿದರು.
ಸರ್ಕಾರ ಮೋಸ ಮಾಡುವುದನ್ನು ನಿಲ್ಲಿಸಬೇಕು, ಹಿಂದಿನ ವರ್ಷದ ಹಣ ಮರು ಪಾವತಿ ಮಾಡಬೇಕು, ದಂಡ ಹಾಕುವಂತಿಲ್ಲ, ಇದು ಮುಂದುವರೆದರೆ ಎಬಿಪಿವಿಪಿ ವತಿಯಿಂದ ಹೋರಾಟ ವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಮತಾ ಜಾಧವ, ಶ್ವೇತಾ ಗೌಡನಾಯಕರ, ವಿದ್ಯಾ ಅಡ್ಮನಿ, ಸಂಗೀತಾ ಎನ್, ಉಷಾ ಶಿಡಗನಾಳ, ಶಿವಕುಮಾರ ಓಲೇಕಾರ, ಹನುಮಂತ ಆರ್.ಆರ್, ಹೇಮಂತ, ಗಿರೀಶ ಜಾಧವ, ಲವಾ ತಾರಿಕೊಪ್ಪ, ಗಣೇಶ ಬಡಿಗೇರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.