ADVERTISEMENT

`ಕ್ರೀಡಾಪಟುಗಳಿಗೆ ಆರೋಗ್ಯ ವಿಮೆ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 8:05 IST
Last Updated 6 ಡಿಸೆಂಬರ್ 2012, 8:05 IST

ಬ್ಯಾಡಗಿ: ರಾಜ್ಯದ ಎಲ್ಲಾ ಕ್ರೀಡಾಪಟುಗಳನ್ನು `ಕ್ರೀಡಾ ಸಂಜೀವಿನಿ' ಯೋಜನೆಯಡಿ ಆರೋಗ್ಯವಿಮೆ ವ್ಯಾಪ್ತಿಗೆ ಒಳಪಡಿಸಲಾಗುವುದೆಂದು ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಹೇಳಿದರು.

ಬುಧವಾರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಐದು ದಿನಗಳವರೆಗೆ ನಡೆಯಲಿರುವ ರಾಜ್ಯಮಟ್ಟದ ಸೀನಿಯರ್ ವಿಭಾಗದ ಪುರುಷ ಹಾಗೂ ಮಹಿಳೆಯರ ಅಸೋಸಿಯೇಶನ್ ಕಪ್ ವಾಲಿಬಾಲ್ ಪಂದ್ಯಾವಳಿಗಳ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿದ ಕ್ರೀಡಾಪಟುಗಳು ರಾಜ್ಯದಲ್ಲಿದ್ದು ಅವರಿಗೆ ಹಿಂದಿನ ಯಾವುದೇ ಸರಕಾರಗಳು ವಿಮಾ ಸೌಲಭ್ಯಗಳನ್ನು ಕಲ್ಪಿಸದಿರುವುದನ್ನು ಮನಗಂಡಿರುವ ಬಿಜೆಪಿ ಸರಕಾರ ಭವಿಷ್ಯದಲ್ಲಿ  ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಕ್ರೀಡಾ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ಕಾನೂನು ತಜ್ಞರ ಸಲಹೆ ಪಡೆದು ಕಳೆದ 15 ವರ್ಷಗಳಿಂದ ಕ್ರೀಡಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ತರಬೇತುದಾರರನ್ನು ನಾಗರಿಕ ಸೇವಾ ವ್ಯಾಪ್ತಿಗೆ ಒಳಪಡಿಸುವ ಮೂಲಕ ನೆನೆಗುದಿಗೆ ಬಿದ್ದಿರುವ ಪ್ರಕರಣಕ್ಕೆ ಅಂತಿಮ ರೂಪ ನೀಡುವುದಾಗಿ ಭರವಸೆ ನೀಡಿದರು. ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯ ಅನುಮೋದನೆಗಾಗಿ ಮೂರು ಬಾರಿ ಸಲ್ಲಿಸಿದ್ದು, ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ಹಾಗೂ ಶೈಕ್ಷಣಿಕ ಅರ್ಹತೆಯ ನಿಯಮವನ್ನು ಪಾಲಿಸದೆ ಇರುವುದರಿಂದ ಇತ್ಯರ್ಥವಾಗದೆ ಮರಳಿ ಬಂದಿದೆ ಎಂದರು.

ತರಬೇತುದಾರರಾದ ಉಮಾಪತಿ ಹಾಗೂ ಮೋಹನ್ ಮೃತಪಟ್ಟಿರುವ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಅದು ನನ್ನ ಗಮನಕ್ಕೆ ಬಂದಿಲ್ಲ. ಕ್ರೀಡಾ ಪ್ರಗತಿಗೆ ಶ್ರಮಿಸಿ ಅಕಾಲಿಕ ಸಾವನ್ನಪ್ಪಿದ ತರಬೇತುದಾರರ ಕುಟುಂಬದ ಸದಸ್ಯರಿಗೆ ಅನುಕಂಪದ ಅಧಾರದ ಮೆಲೆ ಸೇವಾ ಭದ್ರತೆ ಒದಗಿಸಿ ಸೂಕ್ತ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಕಬಡ್ಡಿ ತರಬೇತಿ ಕೇಂದ್ರ: ಈಗಾಗಲೆ ದಾವಣಗೆರೆಯಲ್ಲಿ ಕಬಡ್ಡಿ ಕ್ರೀಡಾ ವಸತಿನಿಲಯ ಆರಂಭಿಸಲಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಆರಂಭಿಸಲಾಗುವುದು ಎಂದರು. ಕ್ರೀಡಾ ಇಲಾಖೆಯಲ್ಲಿ ಕೇವಲ 4 ಜನ ಕಬಡ್ಡಿ ತರಬೇತುದಾರರಿದ್ದು, ಹೊಸ ನೇಮಕಾತಿಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುರೇಶಗೌಡ, ಜಿ.ಪಂ. ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ರಾಜ್ಯ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ನಂದಕುಮಾರ ಉಪಸ್ಥಿತರಿದ್ದರು.

ನಿರ್ಧಾರ ಮರು ಪರಿಶೀಲಿಸಲಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಕೀಯದ ಏರಿಳಿತ ಕಂಡವರು, ಅವರು ಜನರಿಂದ ಪ್ರಶಂಶೆ ಪಡೆಯಲು 40 ವರ್ಷ ಕಾದಿದ್ದಾರೆ. ಈಗ ಪ್ರಾದೇಶಿಕ ಪಕ್ಷ ರಚಿಸುವಲ್ಲಿ ಆತುರದ ನಿರ್ಧಾರ ತೆಗೆದುಕೊಂಡಿದ್ದು ಅದನ್ನು ಪನರ್‌ರಿಶೀಲಿಸುವಂತೆ ಯುವಜನ ಸೇವಾ ಹಾಗೂ  ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಹೇಳಿದರು. 

ಡಿ. 9ರಂದು ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿದ್ದು, ಕೆಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ಪ್ರಾದೇಶಿಕ ಪಕ್ಷ ರಚನೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ.

ರಾಜ್ಯದ ಜನತೆ ಬಿಜೆಪಿ ಸರ್ಕಾರದ ಸಾಧನೆಯನ್ನು ಒಪ್ಪಿಕೊಂಡಿದ್ದು, ವೈಯಕ್ತಿಕ ದ್ವೇಷಕ್ಕೆ ರಾಜ್ಯ, ಪಕ್ಷ ಹಾಗೂ ವೈಯಕ್ತಿಕ ಹಿತಾಸಕ್ತಿಯನ್ನು ಬಲಿ ಕೊಡುವುದು ಅವರ ಘನತೆಗೆ ತಕ್ಕುದಲ್ಲ. ಬಿಜೆಪಿಯಲ್ಲಿದ್ದುಕೊಂಡೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಬಹುದಾಗಿತ್ತು. ಬಿಜೆಪಿಗೆ ಮರಳಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.