ಬ್ಯಾಡಗಿ: ಪಟ್ಟಣದ ಎಪಿಎಂಸಿ ಪ್ರಾಂಗಣ ದಲ್ಲಿನ ಸರ್ಕಾರದ ಗೋವಿನಜೋಳ ಖರೀದಿ ಕೇಂದ್ರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಂದ ಖರೀದಿಸಿದ ಗೋವಿನ ಚೀಲಗಳು ಉಗ್ರಾಣಗಳಿಗೆ ರವಾನೆಯಾಗುತ್ತಿಲ್ಲ. ಇದರಿಂದ ನೂರಾರು ರೈತರು ರಸ್ತೆ ಮಧ್ಯದಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಕ್ವಿಂಟಾಲ್‌ಗೆ ₨ ೧೩೧೦ಬೆಲೆ ನಿಗದಿಪಡಿಸಿ ಗೋವಿನ ಜೋಳ ಖರೀದಿಗೆ ಸರ್ಕಾರ ನಿರ್ಧರಿಸಿರುವುದು ಸ್ವಾಗ ತಾರ್ಹ ಕ್ರಮವಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಯೋಜನೆ ಸಾಕಾರಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ರೈತರು ಆರೋಪಿಸುತ್ತಾರೆ.
ಖರೀದಿ ಕೇಂದ್ರದವರು ನಿಗದಿ ಪಡಿಸಿದ ದಿನದಂದೇ ರೈತರು ಗೋವಿನ ಜೋಳದ ಚೀಲಗಳನ್ನು ಖರೀದಿ ಕೇಂದ್ರಕ್ಕೆ ತರಲಾಗಿದ್ದರೂ ಚೀಲಗಳು ಉಗ್ರಾಣಗಳಿಗೆ ಸೇರದೆ ವಾಹನಗಳು ಸಾಲಾಗಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೋಡಿಹಳ್ಳಿ ಗ್ರಾಮದ ರೈತ ಪ್ರಕಾಶ ಆರೋಪಿಸುತ್ತಾರೆ.
ಕಳೆದ ೫ ದಿನಗಳಿಂದ ಬಯಲಿ ನಲ್ಲಿಯೇ ಕಾಲ ಕಳೆಯಬೇಕಾದ ಉಂಟಾಗಿದ್ದು, ಸೊಳ್ಳೆಗಳ ಕಾಟದಿಂದ ನಲುಗಿ ಹೋಗುವಂತಾಗಿದೆ ಎಂದು ಕಲ್ಲೆದೇವರು ಗ್ರಾಮದ ಚಂದ್ರಶೇಖರ ಚೂರಿ ತನ್ನ ಅಳಲು ತೋಡಿಕೊಂಡರು.
ಕಳಪೆ ಹತ್ತಿ ಬೀಜ ಹಾಗೂ ಗೋವಿನ ಜೋಳದ ಬೀಜದಿಂದ ತಾಲ್ಲೂಕಿನ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದರೂ ಅಲ್ಪಸ್ವಲ್ಪ ಬೆಳೆದ ರೈತರು ಗೋವಿನ ಜೋಳವನ್ನು ಖರೀದಿ ಕೇಂದ್ರಕ್ಕೆ ತಂದರೆ ಬೀದಿ ಯಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ ಎಂದಿರುವ ರೈತ ಮುಖಂಡ ಗಂಗಣ್ಣ ಎಲಿ, ಒಂದೆರಡು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.