ADVERTISEMENT

ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:00 IST
Last Updated 4 ಜೂನ್ 2011, 6:00 IST

ಹಿರೇಕೆರೂರ: ಕಳೆದ ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಹದ ಮಳೆಯಾಗಿದೆ. ಇದರಿಂದ ರೈತರು ಕೃಷಿ ಕಾರ್ಯವನ್ನು ಚುರುಕುಗೊಳಿಸಿದ್ದು, ಹತ್ತಿ ಬಿತ್ತನೆ ಭರದಿಂದ ಸಾಗಿದೆ. ಗೋವಿನ ಜೋಳ ಬಿತ್ತನೆಗೆ ರಾಸಾಯನಿಕ ಗೊಬ್ಬರ ಸಂಗ್ರಹಿಸುತ್ತಿದ್ದಾರೆ.

ಗುರುವಾರದ ಭಾರಿ ಮಳೆಯ ಕಾರಣ ಕೃಷಿ ಚಟುವಟಿಕೆಗೆ ಬಿಡುವು ನೀಡಿದ ರೈತರು ಗೊಬ್ಬರ- ಬೀಜ ಸಂಗ್ರಹಕ್ಕೆ ಮುಂದಾಗಿದ್ದಾರೆ. ಬಹುತೇಕ ರೈತರು ಡಿಎಪಿ ಗೊಬ್ಬರ ಕೇಳುತ್ತಿದ್ದಾರೆ.

ಡಿಎಪಿ ಗೊಬ್ಬರ ಪೂರೈಕೆಯಲ್ಲಿ ತೊಂದರೆಯಾಗುತ್ತಿದ್ದು, ಡಿಎಪಿಯಲ್ಲಿ ರುವ ಅಂಶಗಳಿರುವ ಕಾಂಪ್ಲೆಕ್ಸ್ ಖರೀದಿಸಿ ಎಂದು ಮಾರಾಟಗಾರರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಾರಣ ರೈತರು ಅನಿವಾರ್ಯವಾಗಿ ಕಾಂಪ್ಲೆಕ್ಸ್ ಗೊಬ್ಬರ ಖರೀದಿಸುತ್ತಿದ್ದಾರೆ.
 
`ತಾಲ್ಲೂಕಿನ ಒಟ್ಟು ಗೊಬ್ಬರದ ಬೇಡಿಕೆ 24 ಸಾವಿರ ಟನ್. ಡಿಎಪಿ, ಯೂರಿಯಾ, ಪೊಟ್ಯಾಷ್ ಹಾಗೂ ಕಾಂಪ್ಲೆಕ್ಸ್ ಸೇರಿದಂತೆ ಒಟ್ಟು 13 ಸಾವಿರ ಟನ್ ಗೊಬ್ಬರ  ರೈತರಿಗೆ ಸರಬರಾಜು ಆಗಿದೆ. ಇನ್ನೂ 11 ಸಾವಿರ ಟನ್ ಗೊಬ್ಬರ ಸರಬರಾಜು ಆಗಬೇಕಿದೆ~ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಪಿ. ಸೇವಾನಾಯ್ಕ.

`ತಾಲ್ಲೂಕಿನಲ್ಲಿ ಕಳೆದ ವರ್ಷ 18 ಸಾವಿರ ಟನ್ ರಾಸಾಯನಿಕ ಗೊಬ್ಬರ ಮಾರಾಟ ವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈವರೆಗೆ 3 ಸಾವಿರ ಟನ್ ಗೊಬ್ಬರ ಮಾರಾಟವಾಗಿದೆ. ಡಿಎಪಿ ಗೊಬ್ಬರ ಸರಬರಾಜು ಇಲ್ಲ, ಉಳಿದ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಂಡಿದೆ~ ಎಂದು ಟಿಎಪಿಸಿಎಂಎಸ್ ಪ್ರಧಾನ ವ್ಯವಸ್ಥಾಪಕ ಎಂ.ಎಸ್.ಕೋರಿಗೌಡ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.