ADVERTISEMENT

ಗ್ರಾ.ಪಂ. ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 8:00 IST
Last Updated 21 ಫೆಬ್ರುವರಿ 2012, 8:00 IST

ರಟ್ಟೀಹಳ್ಳಿ: ಸಂಬಂಧಿಕರೊಬ್ಬರ ಮದುವೆ ಪ್ರಯುಕ್ತ  ಇಲ್ಲಿನ ಗ್ರಾಮ ಪಂಚಾಯತನ ಅನೇಕ ಜಾಡಮಾಲಿ ಸಿಬ್ಬಂದಿ ರಜೆ ಘೋಷಿಸಿದ್ದರಿಂದ ಅಧ್ಯಕ್ಷರು ಮತ್ತು ಸಿಬ್ಬಂದಿ ವರ್ಗದವರು ಸೇರಿ ಗ್ರಾಮದ ಸ್ವಚ್ಛತಾ ಕಾರ್ಯಕ್ರಮ ಮಾಡಿದರು. 

ಐತಿಹಾಸಿಕ ಕದಂಬೇಶ್ವರ ದೇವಸ್ಥಾನಕ್ಕೆ ಶಿವರಾತ್ರಿ ಪೂಜೆಗಾಗಿ ಸಾವಿರಾರು ಜನರು ಆಗಮಿಸುವುದರಿಂದ ಇಲ್ಲಿನ ರಸ್ತೆಯ ಬದಿಗೆ ಇರುವ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ಭಕ್ತರ ಮನಸಿಗೆ ಕಿರಿಕಿರಿಯಾಗಬಾರದೆಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಳೆ ಬಸ್ ನಿಲ್ದಾಣದಿಂದ ಕೋಟೆಯ ದೇವಸ್ಥಾನದವರೆಗೆ ಸ್ವಚ್ಛಗೊಳಿಸಿದರು. ವೀರಭದ್ರೇಶ್ವರ ದೇವಸ್ಥಾನದ ಸುತ್ತಲೂ ಕಸ ಗುಡಿಸಿ ಸ್ವಚ್ಛಗೊಳಿಸಿದರು. ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾದ ಸ್ವಚ್ಛತಾ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಯವರೆಗೆ ನಡೆಸಿದರು.

ಒಂದು ಪ್ರದೇಶದಲ್ಲಿ ಕಸವನ್ನು ಸ್ವಚ್ಛಗೊಳಿಸಿದ ಕೆಲವೇ ಕ್ಷಣದಲ್ಲಿ ಸಾರ್ವಜನಿಕರು ಮತ್ತೆ ಕಸ ತಂದು ಸುರಿದಿದ್ದು ಬೇಸರ ತರಿಸುವಂತಿತ್ತು. ಗ್ರಾಮ ಪಂಚಾಯಿತಿ ಸಿಬ್ಬಂದಿಯ ಕಾರ್ಯ ಶ್ಲಾಘಿಸಿದ ಅನೇಕ ಸಾರ್ವಜನಿಕರು ಅವಲಕ್ಕಿ, ಚಹಾ, ತಂಪು ಪಾನೀಯ ನೀಡಿದರು. ಇದರಿಂದ ಸಿಬ್ಬಂದಿ ಹರ್ಷಗೊಂಡು ಮತ್ತೆ ಕಾರ್ಯ ಚುರುಕುಗೊಳಿಸಿದರು. 

ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹರವಿಶೆಟ್ಟರ, ಸಿಬ್ಬಂದಿ ವರ್ಗದ ಶಂಕರಣ್ಣ ಉಜ್ಜಕ್ಕಳವರ, ಪರಮೇಶಪ್ಪ ಅಂತರವಳ್ಳಿ, ರಾಜಕುಮಾರ ಹೇಂದ್ರೆ, ಗಿರೀಶ ಪಾಟೀಲ, ಗ್ರಾಪಂ ಸದಸ್ಯ ಪುಟ್ಟನಗೌಡ ಪಾಟೀಲ, ಶಿವು ದ್ಯಾವಕ್ಕಳವರ, ಬಸವರಾಜ ಹಿರೇಮಠ, ಗೌಸು ಮೆಡ್ಲೇರಿ, ರಾಜು ಹೊಸಳ್ಳಿ, ಚಂದ್ರಪ್ಪ ಅಂತರವಳ್ಳಿ, ಬಸವರಾಜ ಕಟ್ಟೀಕಾರ, ಅಶೋಕ ಹರಿಜನ, ಕುಮಾರ ಹರಿಜನ, ಮಹದೇವಪ್ಪ ಹರಿಜನ, ಬಸವರಾಜ ಕವಲೆತ್ತು, ಮಂಜು ಬಿಳಚಿ. ಶೇಖಪ್ಪ ದ್ಯಾವಕ್ಕಳವರ, ಮಂಜು ಚಲವಾದಿ, ವೀರೇಶ ದ್ಯಾವಕ್ಕಳವರ, ಬಿಲ್ ಕಲೆಕ್ಟರ್, ಬೀದಿ ದೀಪ ಕೆಲಸಗಾರರು, ಕೆಲವು ಜಾಡಮಾಲಿ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.