ADVERTISEMENT

ಚುನಾವಾಣೆ: ವಿವಿಧೆಡೆ ದಾಳಿ ₹ 1.64 ಲಕ್ಷ ಮೊತ್ತದ ಅಕ್ರಮ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 10:05 IST
Last Updated 31 ಮಾರ್ಚ್ 2018, 10:05 IST

ಹಾವೇರಿ: ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮ ದಾಸ್ತಾನು ಇರಿಸಲಾಗಿದ್ದ ₹ 1.64 ಲಕ್ಷ ಮೊತ್ತದ ಮದ್ಯ ಜಪ್ತಿ ಮಾಡಿದ್ದಾರೆ. ಉಪ ವಿಭಾಗಾಧಿಕಾರಿಗಳಾದ ಮಹ್ಮದ್ ರೋಷನ್ ಮತ್ತು ಪಿ.ಎನ್.ಲೋಕೇಶ್ ಅವರ ನೇತೃತ್ವದಲ್ಲಿ ವಿವಿಧೆಡೆ ತಪಾಸಣೆ ಕೈಗೊಂಡು, ಅಕ್ರಮ ದಾಸ್ತಾನಿನ ಮದ್ಯ ವಶ ಪಡಿಸಲಾಗಿದೆ. ವಾಹನಗಳ ಮೇಲೆ ತೀವ್ರ ನಿಗಾ ವಹಿಸಿ ತಪಾಸಣೆ ನಡೆಸಲಾಗುತ್ತಿದೆ. ಹೆದ್ದಾರಿ, ಡಾಬಾ, ಹೋಟೆಲ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದ್ದಾರೆ.

ಬ್ಯಾಡಗಿ, ಶಿಗ್ಗಾವಿ ಹಾಗೂ ಹಾವೇರಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಅನೀರಿಕ್ಷಿತ ದಾಳಿ ನಡೆಸಲಾಗಿತ್ತು. ಬ್ಯಾಡಗಿ ತಾಲ್ಲೂಕಿನ ಕುಮ್ಮೂರು ಕ್ರಾಸ್‌ನ ಢಾಬಾದಲ್ಲಿ ₹ 26.47 ಸಾವಿರ, ಶಿಗ್ಗಾವಿ ತಾಲ್ಲೂಕಿನ ಮುತ್ತಹಳ್ಳಿ ಕ್ರಾಸ್‌ನ ಢಾಬಾದಲ್ಲಿ ₹ 1.30 ಲಕ್ಷ ಹಾವೇರಿ ತಾಲ್ಲೂಕಿನ ತೆರದಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ₹ 7.79 ಸಾವಿರ ಸೇರಿ ಒಟ್ಟು ₹ 1.64 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಹಾ ಅಂಗಡಿಯಲ್ಲಿ ಮದ್ಯ ವಶ: ಬ್ಯಾಡಗಿ ತಾಲ್ಲೂಕಿನ ರಾಮಗೊಂಡನಹಳ್ಳಿಯಲ್ಲಿ ಗುರುವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ಚಹಾ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶಪಡಿಸಿಕೊಂಡಿದ್ದಾರೆ.ಆರೋಪಿ ಬೀರಪ್ಪ ನಿಂಗಪ್ಪ ಬಡಪ್ಪನವರ ಎಂಬಾತ ಪರಾರಿಯಾಗಿದ್ದಾನೆ. ಒಟ್ಟ 32 ಪಾಕೀಟ್ ಮದ್ಯ ವಶಪಡಿಸಿಕೊಂಡಿದ್ದು, ಅದರ ಬೆಲೆ ₹ 1,528 ಎಂದು ಎಎಸ್‌ಐ ಆರ್.ವೈ.ಅಂಬಿಗೇರ ತಿಳಿಸಿದ್ದಾರೆ. ಈ ಕುರಿತು ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.