ADVERTISEMENT

ಜಾಗೃತಿ ಫಲ: ಶೌಚಾಲಯ ನಿರ್ಮಾಣಕ್ಕೆ ಮುಂದಾದ 10 ಕುಟುಂಬ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 6:56 IST
Last Updated 16 ಅಕ್ಟೋಬರ್ 2017, 6:56 IST

ರಟ್ಟೀಹಳ್ಳಿ: ಸಮೀಪದ ಸಣ್ಣಗುಬ್ಬಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಶನಿವಾರ ನಡೆದ ‘ಶೌಚಾಲಯ ಜಾಗೃತಿ ಆಂದೋಲನ’ದ ಫಲವಾಗಿ, ಶೌಚಾಲಯ ಹೊಂದಿಲ್ಲದ 30 ಕುಟುಂಬಗಳ ಪೈಕಿ 10 ಕುಟುಂಬಗಳು ಭಾನುವಾರ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಜಾಗೃತಿ ಆಂದೋಲನದಿಂದಾಗಿ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಳ್ಳಲು ಆಸಕ್ತಿ ತೋರಿಸಿದ್ದಾರೆ. ಇನ್ನು 20 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡೆರೆ, ಇಡೀ ಗ್ರಾಮ ಬಯಲು ಶೌಚಾಲಯ ಮುಕ್ತ ಗ್ರಾಮವಾಗಲಿದೆ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಾಗರತ್ನ ಮುದ್ದಪ್ಪಳವರ ತಿಳಿಸಿದರು.

ಗ್ರಾಮದ ಮಂಜುನಾಥ ಗೊಂದಳೆ, ಭೀಮಕ್ಕ ಹಾದರಗೇರಿ, ರವೀಂದ್ರ ಗಿರಿಜಪ್ಪನವರ, ಗೀತಮ್ಮ ಮೇಗಳಗೇರಿ, ಗಂಗಪ್ಪ ಗೋಡಿಹಾಳ, ಶಿದ್ದಪ್ಪ ಬೈರೋಜಿ, ದುರುಗಮ್ಮ ಗಿರಿಜಪ್ಪನವರ, ನೀಲಮ್ಮ ಹಾದರಗೇರಿ, ಹನುಮಂತಪ್ಪ ಗೋಣೆಮ್ಮನವರ ಅವರು ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ADVERTISEMENT

ಗ್ರಾಮದ 10 ಕುಟುಂಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗದ ಸಮಸ್ಯೆಯಿದೆ. ಆದ್ದರಿಂದ, ಅವರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಕೊಡುವ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಸದಸ್ಯರೊಂದಿಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ ನಾಗಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.