ಶಿಗ್ಗಾವಿ: ಇತಿಹಾಸದ ಪರಂಪರೆ ಯಂತೆ ಗ್ರಾಮೀಣ ಪ್ರದೇಶದ ಜನರಲ್ಲಿ ಜಾತ್ರೆ, ಹಬ್ಬಹರಿದಿನಗಳು ಹಾಗೂ ಪುರಾಣ ಪುಣ್ಯಕತೆಗಳ ಪ್ರವಚನಗಳು ಬದುಕಿನ ಯಶಸ್ವಿಗೆ ಚೈತನ್ಯ ನೀಡುವ ಶಕ್ತಿ ಹೊಂದಿವೆ ಎಂದು ಕಾಡಾ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಹೇಳಿದರು.
ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದ ಪಂಚಪಾಂಡವರ ಜಾತ್ರೆ ಪ್ರಾರಂಭೋತ್ಸವ ಹಾಗೂ `ಕರ್ನಾಟ ಭಾರತ ಕಥಾಮಂಜರಿ~ ಗಮಕ ಪುರಾಣ-ಪ್ರವಚನ, ಸೇವಾ ದಾರಿಗಳ ಸನ್ಮಾನ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿ, ಮನುಷ್ಯ ಎಷ್ಟೇ ಬೆಳೆದರೂ ಹಿಂದಿನ ಸಂಪ್ರದಾಯ ಮರೆಯಲು ಸಾಧ್ಯವಿಲ್ಲ.
ಅದರಿಂದ ಭಾರತೀಯ ಸಂಸ್ಕೃತಿ ಶ್ರೀಮಂತಿಕೆ ಪಡೆಯಲು ಸಾಧ್ಯವಾಗಿದೆ. ಜಾತ್ರೆ, ಹಬ್ಬಹರಿದಿನಗಳು ಹಾಗೂ ಪ್ರವಚನಗಳು ಬದುಕಿನ ಬವಣೆಗಳನ್ನು ದೂರ ಮಾಡುವ ಜೊತೆಗೆ ಹೊಸತನ ಮೂಡಿಸುತ್ತಿವೆ ಎಂದರು.
ಗಂಜೀಗಟ್ಟಿ ಶಿವಲಿಂಗೇಶ್ವರ ಶಿವಾ ಚಾರ್ಯ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ಪಾಂಡವರು 12 ವರ್ಷಗಳ ಕಾಲ ವನವಾಸ ಮುಗಿಸಿ 13ನೇ ವರ್ಷವನ್ನು ಅಜ್ಞಾತದಲ್ಲಿ ಕಳೆದ ಪುಣ್ಯ ಸ್ಥಳ ಇದಾಗಿದ್ದು, ಈ ಗ್ರಾಮಕ್ಕೆ ಬನ್ನೂರು-ಬನ್ನಿಕೊಪ್ಪ ಎಂದು ನಾಮಕರಣವಾಗಿದೆ.
ಅಜ್ಞಾತ ದಲ್ಲಿ ನೀಡುವ ಸಂರಕ್ಷಣೆ ಪರಮಪುಣ್ಯ ವಾದದ್ದು, ಹೀಗಾಗಿ ಅಜ್ಞಾತದಲ್ಲಿ ಪಾಂಡವರಿಗೆ ಸೂಕ್ತ ರಕ್ಷಣೆ ನೀಡಿರುವ ಕಾರಣ ಈ ಗ್ರಾಮಗಳು ಸಹ ಧನ್ಯವಾಗಿದೆ ಎಂದ ಅವರು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ಪಂಚಪಾಂಡವರ ದೇವಾಲಯಗಳನ್ನು ನಿರ್ಮಿಸಲಾಗಿವೆ ಎಂದು ಶಾಸನಗಳಿಂದ ತಿಳಿದು ಬರುತ್ತಿದೆ ಎಂದು ಹೇಳದರು.
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿ, ನಿವೃತ್ತ ಪ್ರಾಚಾರ್ಯ ಎಸ್.ವಿ. ದೇಶಪಾಂಡೆ ಗಮಕ ಸಾಹಿತ್ಯ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜಿಪಂ. ಸದಸ್ಯರಾದ ಬಿ.ಟಿ.ಇನಾಮತಿ, ಸಿ.ಎಸ್. ಪಾಟೀಲ, ತಾಪಂ. ಮಾಜಿ ಅಧ್ಯಕ್ಷ ವೀರನಗೌಡ ಪಾಟೀಲ, ತಾಪಂ. ಸದಸ್ಯ ನಿಂಗಪ್ಪ ಜವಳಿ, ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ, ಗಣ್ಯ ವ್ಯಾಪಾರಸ್ಥ ಷಣ್ಮುಕಪ್ಪ ಕಡೆಮನಿ, ಶಂಕ್ರೆಪ್ಪ ಕಡೆಮನಿ, ಸಹದೇವಪ್ಪ ಪೂಜಾರ, ಟಾಕನಗೌಡ್ರ ಪಾಟೀಲ, ಮಲ್ಲಿಕಾರ್ಜುನ ಮಡಿ ವಾಳರ, ಸಣ್ಣಪ್ಪ ಕಡೆಮನಿ, ಎಂ.ಎಸ್. ಅಕ್ಕಿ, ಯಲ್ಲಪ್ಪ ರುದ್ರಮನಿ, ಗುರು ನಾಥ ಕುನ್ನೂರ, ಮಲ್ಲೇಶಪ್ಪ ಕಡೆಮನಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಎಂ.ಸಿ.ಹಿರೇಮಠ ಸ್ವಾಗತಿಸಿ ದರು. ಉಪನ್ಯಾಸಕ ಹಿತ್ತಲಮನಿ ನಿರೂಪಿಸಿ, ವಂದಿಸಿದರು. ನಂತರ ಗುವಿನಹಳ್ಳಿ ವಿಶ್ವನಾಥ ಕುಲಕರ್ಣಿ, ಹತ್ತಿಮತ್ತೂರಿನ ಮಲ್ಲಿಕಾರ್ಜುನ ಆರಾಧ್ಯಮಠ ಅವರಿಂದ ಗಮಕ ಗಾಯನ ಪ್ರವಚನ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.