ADVERTISEMENT

ಜಿ.ಎಂ. ಶುಗರ್ಸ್‌,ಆಡಳಿತ ಮಂಡಳಿ ಒಳ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 21 ಮೇ 2017, 7:16 IST
Last Updated 21 ಮೇ 2017, 7:16 IST

ಹಾವೇರಿ: ‘ತಾಲ್ಲೂಕಿನ ಸಂಗೂರ ಸಕ್ಕರೆ ಕಾರ್ಖಾನೆಯ ಗುತ್ತಿಗೆ ಕಂಪೆನಿ ಜಿ.ಎಂ. ಶುಗರ್ಸ್‌ ಮತ್ತು ಆಡಳಿತ ಮಂಡಳಿಯು ಒಳಒಪ್ಪಂದ ಮಾಡಿಕೊಂಡು ದರ ನಿಗದಿ ಮಾಡುತ್ತಿದ್ದು, ಕಬ್ಬು ಬೆಳೆಗಾರರು ಅನಾಥರಾಗಿದ್ದಾರೆ’ ಎಂದು ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2016–17ನೇ ಸಾಲಿನ ಆರಂಭದಲ್ಲಿ ಜಿ.ಎಂ. ಶುಗರ್ಸ್ ಮತ್ತು ಆಡಳಿತ ಮಂಡಳಿಯು ರಾತ್ರೋರಾತ್ರಿ ಒಪ್ಪಂದ ಮಾಡಿಕೊಂಡು, ಟನ್‌ ಕಬ್ಬಿಗೆ ಮುಂಗಡವಾಗಿ ₹2,625 ನಿಗದಿ ಮಾಡಿವೆ. ಬಳಿಕ ಸುತ್ತಲಿನ ಕಾರ್ಖಾನೆ ನೀಡುವ ದರ ನೀಡುವುದಾಗಿ ಜಿ.ಎಂ. ಶುಗರ್ಸ್‌ ಹೇಳಿತ್ತು. ಆದರೆ, ಈಗ ಟನ್‌ ಕಬ್ಬಿಗೆ ಕೇವಲ 82 ಕೆ.ಜಿ. ಸಕ್ಕರೆ ಇಳುವರಿ ತೋರಿಸಿ ಮೋಸ ಮಾಡುತ್ತಿದೆ.

ಆಡಳಿತ ಮಂಡಳಿಯು ರೈತರ ಪರ ಇರುತ್ತಿದ್ದರೆ, ಆಸುಪಾಸಿನ ಕಾರ್ಖಾನೆಗಳು ನೀಡುವ ದರ ನೀಡಲು ಪಟ್ಟು ಹಿಡಿಯುತ್ತಿತ್ತು’ ಎಂದರು.‘ಆಡಳಿತ ಮಂಡಳಿಯ ತಪ್ಪಿನಿಂದ ಜಿಲ್ಲೆಯ ಬೆಳೆಗಾರು ಟನ್‌ ಕಬ್ಬಿಗೆ ₹500 ಕಳೆದುಕೊಳ್ಳುವಂತಾಗಿದೆ’ ಎಂದರು.

ADVERTISEMENT

ಇಳುವರಿಯಲ್ಲಿ ಮೋಸ: ‘ಪಕ್ಕದ ಮೈಲಾರ ಸಕ್ಕರೆ ಕಾರ್ಖಾನೆಯು ಟನ್‌ಗೆ ₹ 3,150 ನೀಡಿ ಹಾವೇರಿಯಿಂದ ಕಬ್ಬು ಖರೀದಿ ಮಾಡಿತ್ತು.  ಈ  ಕಬ್ಬಿನಲ್ಲಿ ಪ್ರತಿ ಟನ್‌ಗೆ 110ಕೆ.ಜಿ. ಸಕ್ಕರೆ ಇಳುವರಿ ತೋರಿಸಿದೆ. ಆದರೆ, ಇದೇ ವ್ಯಾಪ್ತಿಯ ಕಬ್ಬು ನುರಿಸಿದ ಸಂಗೂರು ಸಕ್ಕರೆ ಕಾರ್ಖಾನೆಯಲ್ಲಿ ಕಡಿಮೆ ಇಳುವರಿ ಬರಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

‘2016–17ನೇ ಸಾಲಿನ ಕಬ್ಬು ಪೂರೈಕೆಯನ್ನು ಅವಲೋಕಿಸಿದರೆ, ಜಿ.ಎಂ. ಶುಗರ್ಸ್‌ ರೈತರಿಗೆ ಇನ್ನೂ ₹12.5 ಕೋಟಿ ಬಾಕಿ ನೀಡಬೇಕು. ಆದರೆ, ‘ಹಾವೇರಿ ಪಂಚಾಯ್ತಿ’ ಮಾಡಿದಂತೆ ಮಾಡಿ ಪ್ರತಿ ಟನ್‌ಗೆ ₹50ರಿಂದ ₹100 ನೀಡುವ ಹುನ್ನಾರ ನಡೆಸಿದ್ದಾರೆ’ ಎಂದರು.

‘ದೇಶದಲ್ಲಿ ಕಬ್ಬಿನ ಬೆಳೆ ಕಡಿಮೆ ಇದೆ. ಆದರೆ, ಆಡಳಿತ ಮಂಡಳಿ ನೇತೃತ್ವದಲ್ಲಿಯೇ ಈ ಬಾರಿಯೂ ದರ ನಿಗದಿ ಮಾಡಿದರೆ, ವಂಚಿಸುವ ಸಾಧ್ಯತೆ ಇದೆ. ಅದಕ್ಕಾಗಿ, ಸ್ಪರ್ಧಾತ್ಮಕ ದರ ನೀಡುವ ಕಾರ್ಖಾನೆಗೆ ಕಬ್ಬು ಪೂರೈಸುವುದೇ ಉತ್ತಮ’ ಎಂದರು.

ಜೆಡಿಎಸ್‌ ಮುಖಂಡ ಡಾ.ಸಂಜಯ ಡಾಂಗೆ, ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾಗಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಯೋಗಿ ಬೆನ್ನೂರ, ರಾಜಣ್ಣ ದೊಡ್ಡಮನಿ ಹಾಗೂ ಪರಶುರಾಮ ಶಂಕರಣ್ಣನವರ ಇದ್ದರು.

ಜೆಡಿಎಸ್ ರೈತ ಘಟಕದ ಕಾರ್ಯಾಧ್ಯಕ್ಷ

ಹಾವೇರಿ: ‘ನನ್ನನ್ನು ಜೆಡಿಎಸ್ ರಾಜ್ಯ ರೈತ ಘಟಕದ ಕಾರ್ಯಾಧ್ಯಕ್ಷರಾಗಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೇಮಕ ಮಾಡಿದ್ದಾರೆ’ ಎಂದು ಶಿವಾನಂದ ಗುರುಮಠ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಹಿತಾಸಕ್ತಿ ಕಾಯುವಲ್ಲಿ ವಿಫಲವಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ‘ರಾಜಕೀಯ ಡೊಂಬ ರಾಟ’, ಕಚ್ಚಾಟ, ಪೊಳ್ಳು ಭರವಸೆ, ಬೆಲೆಯೇರಿಕೆಯಿಂದ ಜನತೆ ಬೇಸತ್ತಿದ್ದಾರೆ. ಹೀಗಾಗಿ ಬೇರು ಮಟ್ಟದಿಂದ ಜೆಡಿಎಸ್‌ ಸಂಘಟಿಸಲು ನೇಮಕ ಮಾಡಿದ್ದಾರೆ’ ಎಂದು ತಿಳಿಸಿದರು.

* *

ಪ್ರಸಕ್ತ ಹಂಗಾಮಿನಲ್ಲಿ ರೈತರು ಸಂಗೂರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಬದಲಿಗೆ, ಹೆಚ್ಚಿನ ದರ ನೀಡುವ ಬೇರೆ ಕಾರ್ಖಾನೆಗೆ ಕಬ್ಬು ಕೊಡುವುದು ಸೂಕ್ತ
ಶಿವಾನಂದ ಗುರುಮಠ
ಅಧ್ಯಕ್ಷ, ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾಗಾರರ ಸಂಘದ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.