ADVERTISEMENT

ಜಿಪಿಎಸ್ ಬಳಸಿ ಬೆಳೆ ಸಮೀಕ್ಷೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 6:54 IST
Last Updated 24 ಅಕ್ಟೋಬರ್ 2017, 6:54 IST

ಹಾನಗಲ್‌: ಜಿಪಿಎಸ್ ಬಳಸಿ ಬೆಳೆ ಸಮೀಕ್ಷೆಯ ಕಾರ್ಯವು ತಾಲ್ಲೂಕಿನಲ್ಲಿ ಭರದಿಂದ ಸಾಗಿದ್ದು, ಇನ್ಮುಂದೆ ಕಚೇರಿಯಲ್ಲಿ ಕುಳಿತು ಪಹಣಿಯಲ್ಲಿ ಬೆಳೆ ನಮೂದಿಸುವುದಕ್ಕೆ ಬ್ರೇಕ್ ಬೀಳಲಿದೆ. ಅಂದಾಜು ಮಾಹಿತಿಗಳ ಪ್ರಕಾರ ಪ್ರತಿ ವರ್ಷವೂ ಪಹಣಿ ಪತ್ರದಲ್ಲಿ ರೈತರು ಬೆಳೆದ ಬೆಳೆಗಳನ್ನು ನಮೂದಿಸಲಾಗುತ್ತಿತ್ತು. ಆದರೆ ಈ ಬಾರಿ ರೈತರ ಜಮೀನುಗಳಿಗೆ ಭೇಟಿ ನೀಡಿ ಮೊಬೈಲ್ ತಂತ್ರಾಂಶದಲ್ಲಿ ಜಿ.ಪಿ.ಎಸ್ ಮೂಲಕ ಕೇಳಲಾದ ಮಾಹಿತಿ ನಮೂದಿಸುವ ಕಾರ್ಯ ಮಾಡಬೇಕಿದೆ

ಈ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ತರಬೇತಿ ಪಡೆದ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಮುಂದಿನ ಒಂದು ತಿಂಗಳ ಅವಧಿಯಲ್ಲಿ ರೈತರ ತೋಟ-ಗದ್ದೆಗಳಿಗೆ ಭೇಟಿ ನೀಡಲಿದ್ದಾರೆ.

ಮೊಬೈಪ್ ಅಪ್ಲಿಕೇಷನ್: ಪಹಣಿ ಪತ್ರದಲ್ಲಿ ಕರಾರುವಕ್ಕಾಗಿ ರೈತರು ಬೆಳೆದ ಬೆಳೆಗಳ ಮಾಹಿತಿ ನಮೂದಾಗುವಂತೆ ಮೊಬೈಲ್ ಆಪ್ ಒಂದನ್ನು ಸಿದ್ಧಪಡಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಬೇತಿ ನೀಡುವ ವೇಳೆಯಲ್ಲೆ ಅವರ ಮೊಬೈಲ್‌ಗಳಲ್ಲಿಈ ಆಪ್ ಡೌನ್ಲೋಡ್ ಮಾಡಲಾಗಿದೆ, ಈ ಆಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿ ನೀಡಲಾಗಿದೆ.

ADVERTISEMENT

ಗ್ರಾಮ ಲೆಕ್ಕಾಧಿಕಾರಿ ಕಾರ್ಯ ನಿರ್ವಹಿಸುವ ಗ್ರಾಮಗಳ ಸಂಪೂರ್ಣ ಸರ್ವೆ ನಂಬರ್‌ಗಳನ್ನು ಆಪ್‌ನಲ್ಲಿ ಮೊದಲೆ ನಮೂದಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ರೈತರ ತೋಟ ಇಲ್ಲವೇ ಗದ್ದೆಗಳ ಸರ್ವೆ ನಂಬರಿನಲ್ಲಿ ನಿಂತುಕೊಂಡು ಜಿ.ಪಿ.ಎಸ್ ಮೂಲಕ ರೈತರು ಬೆಳೆ ಬೆಳೆದ ಸ್ಥಳದಲ್ಲಿಯೇ ಭಾವಚಿತ್ರ ತೆಗೆದು ಅಪ್ಲೋಡ್ ಮಾಡತೊಡಗಿದ್ದಾರೆ.

ಕೃಷಿಕರಿಗೆ ಲಾಭ: ಸರ್ಕಾರ ನೀಡುವ ಸಬ್ಸಿಡಿ, ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಂಬಲ ಘೋಷಣೆ ಯೋಜನೆಗಳನ್ನು ಸರಿಯಾಗಿ ವಿತರಣೆ ಮಾಡಲು ರೈತರು ಬೆಳೆದ ಬೆಳೆಗಳ ಕರಾರುವಕ್ಕಾದ ಮಾಹಿತಿ ಅತ್ಯವಶ್ಯ. ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯಿಂದ ಹೆಚ್ಚಿನ ಸಮಯ ಬೆಳೆ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿತ್ತು.

ಆದರೆ ಮೊಬೈಲ್ ತಂತ್ರಾಂಶದಲ್ಲಿ ಪಹಣಿ ಪತ್ರದಲ್ಲಿ ರೈತರ ಬೆಳೆಗಳು ದಾಖಲಾಗುವುದರಿಂದ ಯಾವೊಬ್ಬ ರೈತನು ಬೆಳೆ ಮಾಹಿತಿ ನಮೂದಾಗಿಲ್ಲ ಎಂದು ಹೇಳುವಂತಿಲ್ಲ. ಕೆಲವೊಮ್ಮೆ ನಿರ್ದಿಷ್ಟ ಬೆಳೆ ಬಿತ್ತನೆ ಮಾಡಲಾದರೂ, ವಿಸ್ತೀರ್ಣಕ್ಕಿಂತ ಹೆಚ್ಚಾಗಿ ನೋಂದಣಿ ಮಾಡಲಾಗುತ್ತಿತ್ತು.

ಇದರಿಂದ ಬೆಳೆವಿಮೆ ವಿತರಣೆ ಸಮಯದಲ್ಲಿ ಕೆಲ ರೈತರಿಗೆ ಅನಗತ್ಯವಾಗಿ ಹೆಚ್ಚಿನ ಹಣ ಸಂದಾಯವಾಗುವ ಸಾಧ್ಯತೆಗಳಿದ್ದವು. ಇದನ್ನು ತಪ್ಪಿಸುವ ಸಲುವಾಗಿ ಮೊಬೈಲ್ ತಂತ್ರಾಂಶದ ಮೂಲಕ ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ತೊಡಗಿದ್ದಾರೆ.

‘ಬೆಳೆಗಳ ಸಮೀಕ್ಷೆ ನಡೆಸುವ ಕಾರ್ಯ ವಾರದಿಂದ ನಡೆಯುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ತರಬೇತಿ ಪಡೆದ ಗ್ರಾಮ ಲೆಕ್ಕಾಧಿಕಾರಿಗಳು ಮುಂದಿನ ಒಂದು ತಿಂಗಳ ಅವಧಿಯಲ್ಲಿ ರೈತರ ತೋಟ-ಗದ್ದೆಗಳಿಗೆ ಭೇಟಿ ನೀಡಲಿದ್ದಾರೆ’ ಎಂದು ತಹಶೀಲ್ದಾರ್‌ ಶಕುಂತಲಾ ಚೌಗಲಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಗ್ರಾಮ ಲೆಕ್ಕಾಧಿಕಾರಿಗಳು ರೈತರ ಸಾಗುವಳಿ ಭೂಮಿಗೆ ಬರುವ ವೇಳೆಯಲ್ಲಿ ರೈತರು ಕಡ್ಡಾಯವಾಗಿ ಆಧಾರ್ ಪ್ರತಿ, ಮೊಬೈಲ್ ನಂಬರ್ ನೀಡಬೇಕು. ಜೊತೆಯಲ್ಲಿ ಆಧಾರ್ ನಂಬರ್ ಬಳಸಿಕೊಳ್ಳುವಂತೆ ಸಮ್ಮತಿ ಪತ್ರವನ್ನು ನೀಡಬೇಕಿದೆ. ಒಂದು ದಿನಕ್ಕೆ ಒಬ್ಬ ಗ್ರಾಮ ಲೆಕ್ಕಾಧಿಕಾರಿ 30 ಸ.ನಂ.ಗಳ ಬೆಳೆ ಸಮೀಕ್ಷೆ ಕೈಗೊಳ್ಳುವಂತೆ ಗುರಿ ನೀಡಲಾಗಿದೆ’ ಎಂದೂ ಚೌಗಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.