ADVERTISEMENT

ಜಿಲ್ಲಾ ಆಸ್ಪತ್ರೆಗೆ ಸಚಿವರ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 11:06 IST
Last Updated 11 ಜುಲೈ 2013, 11:06 IST

ಹಾವೇರಿ: ನಗರದ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಆಗವಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸಣ್ಣಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರು ಬುಧವಾರ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿದ್ದಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಮಾಶಾಳ ಅವರನ್ನು ಭೇಟಿ ಮಾಡಿ ಆಸ್ಪತ್ರೆಯ ವ್ಯವಸ್ಥೆ ಕುರಿತು ಮಾಹಿತಿ ಪಡೆದರಲ್ಲದೇ, ಖುದ್ದಾಗಿ ಎಲ್ಲ ವಾರ್ಡ್ ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ನೇರವಾಗಿ ರೋಗಿಗಳಿಂದಲೇ ಮಾಹಿತಿ ಪಡೆದರು.

ಡೆಂಗೆ ಹಾಗೂ ಮಲೇರಿಯಾ ರೋಗಿಗಳನ್ನು ಒಂದೇ ಕಡೆ ಹಾಕಿರುವುದು ಸಚಿವರ ಗಮನಕ್ಕೆ ಬಂದಿತು. ಬೇರೆ ಬೇರೆ ಸಾಂಕ್ರಾಮಿಕ ರೋಗ ಇರುವ ರೋಗಿಗಳನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇಡುವುದನ್ನು ಬಿಟ್ಟು ಒಂದೇ ವಾರ್ಡ್‌ನಲ್ಲಿ ಇಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ಆಯಾ ರೋಗದ ರೋಗಿಗಳನ್ನು ಪ್ರತ್ಯೇಕ ಇಡುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ತಾಕೀತು ಮಾಡಿದರು.

ಜಿಲ್ಲಾ ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ರೋಗ ವಾಸಿ ಮಾಡುವ ಆಸ್ಪತ್ರೆಯೇ ರೋಗ ಹರಡುವಂತೆ ಇರಬಾರದು. ಕೂಡಲೇ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಾಂತಿ ಬೇಧಿ ಹಾಗೂ ಜ್ವರದಂತ ಪ್ರಕರಣಗಳಿಗೆ ಕಾರಣಗಳೇನು? ಅವುಗಳ ಶಮನಕ್ಕಾಗಿ ಕೈಗೊಂಡ ಕ್ರಮಗಳೇನು ಎಂದು ಕೇಳಿದ ಅವರು, ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ರೋಗಗಿಳಿಗೆ ವೈದ್ಯ ಕೊರತೆ ಕಾರಣ ನೀಡದೇ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ 154 ಎಂ.ಬಿ.ಬಿ.ಎಸ್ ಹಾಗೂ ಬಿ.ಇ.ಎಂ.ಎಸ್. ವೈದ್ಯರುಗಳಿದ್ದಾರೆ. ಅವರ ಸೇವೆಯನ್ನು ಸಮರ್ಥವಾಗಿ ಸಕಾಲಕ್ಕೆ ಸದ್ಬಳಕೆ  ಮಾಡಿಕೊಳ್ಳುವಂತೆ ಹಾಗೂ ತುರ್ತು ಸಂದರ್ಭದಲ್ಲಿ ವೈದ್ಯರಿಗೆ ರಜೆ ನೀಡದೇ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯುವಂತೆ ಹಾಗೂ ವಿವಿಧ ರೋಗಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ನೋಡಲು ಬರುವ ಸಂಬಂಧಿಕರಿಗೆ ವೇಳೆಯನ್ನು ನಿಗಧಿಪಡಿಸಬೇಕು. ಆ ವೇಳೆಯಲ್ಲಿ ಮಾತ್ರ ರೋಗಿಗಳಿಗೆ ಭೇಟಿ ಅವಕಾಶ ಕಲ್ಪಿಸಬೇಕು. ಇದರಿಂದ ರೋಗಿಗಳಿಗೆ ಒಳ್ಳೆಯದು ಹಾಗೂ ಆಸ್ಪತ್ರೆಯನ್ನು ಶುಚಿಯಾಗಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಸಚಿವರೊಂದಿಗೆ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್. ಎಸ್. ರಾಘವೇಂದ್ರಸ್ವಾಮಿ,  ಡಾ. ಬಸವರಾಜ ಸಜ್ಜನ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.